ಮೇ 29: ಮೂಡುಬಿದಿರೆ, ಮೂಲ್ಕಿ, ಸುಳ್ಯದ 61 ವಾರ್ಡ್‌ಗಳಿಗೆ ಚುನಾವಣೆ

Update: 2019-05-02 14:44 GMT

ಮಂಗಳೂರು, ಮೇ 2: ರಾಜ್ಯ ಚುನಾವಣಾ ಆಯೋಗವು ಮೊದಲ ಹಂತದ ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆಸಿದ್ದು, ಅದರಂತೆ 2ನೇ ಹಂತದಲ್ಲಿ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಆದೇಶಿಸಿದೆ.

ಮೂಡುಬಿದಿರೆ ಪುರಸಭೆಯ 23 ವಾರ್ಡ್‌ಗಳು, ಮೂಲ್ಕಿ ಪಟ್ಟಣ ಪಂಚಾಯತ್‌ನ 18 ವಾರ್ಡ್‌ಗಳು, ಸುಳ್ಯ ಪಟ್ಟಣ ಪಂಚಾಯತ್‌ನ 20 ವಾರ್ಡ್‌ಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಸಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೇ 2ರಿಂದ ಆರಂಭವಾಗಿ ಮೇ 31ರವರೆಗೆ ಜಾರಿಯಲ್ಲಿರುತ್ತದೆ.

ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯು ಮೇ 9ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರಗಳನ್ನು ಪರಿಶೀಲಿಸಲಿದ್ದು, ಮೇ 20ರಂದು ಉಮೇದುವಾರಿಕೆಗಳನ್ನು ಹಿಂದೆಗೆದುಕೊಳ್ಳುವ ಕೊನೆಯ ದಿನವಾಗಿದೆ. ಮೇ 29ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ತಾಲೂಕು ಕೇಂದ್ರ ಸ್ಥಳಗಳಲ್ಲಿ ಮೇ 31ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ನೀತಿ ಸಂಹಿತೆಯು ಚುನಾವಣೆ ನಡೆಯುತ್ತಿರುವ ನಗರ ಪ್ರದೇಶಗಳಿಗೆ ಮಾತ್ರ ಅನ್ವಯವಾಗಲಿದೆ. ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಮಂತ್ರಿಗಳು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಮತ್ತು ಇತರ ಸಭೆಗಳನ್ನು ನಡೆಸುವಂತಿಲ್ಲ. ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ ಅನುಷ್ಠಾನಗೊಳಿಸಲು ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಆದರೆ ಅಂತಹ ಯೋಜನೆಯ ಅನುಷ್ಠಾನವನ್ನು ಸಾರ್ವಜನಿಕ ಸಮಾರಂಭ ಹಾಗೂ ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ನಡೆಸುವುದನ್ನು ನಿಷೇಧಿಸಲಾಗಿದೆ.

ನೆರೆಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಟಿತ ಜನಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆಯು ಅಡ್ಡ ಬರುವುದಿಲ್ಲ. ಯಾವುದೇ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ, ಸಮಾರಂಭಗಳನ್ನು ನಡೆಸಲು ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಆದರೆ ರಾಜಕೀಯ ವ್ಯಕ್ತಿಗಳು ಸಂಹಿತೆಗೆ ಬಾಧಕವಾಗದ ರೀತಿಯಲ್ಲಿ ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ, ಹೇಳಿಕೆ ಅಥವಾ ಆಶ್ವಾಸನೆ ನೀಡುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ನಾಗರಾಜು ಎನ್.ಆರ್. ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News