​ಸಹಕಾರಿ ರಂಗ ವಿದ್ಯಾ ಕ್ಷೇತ್ರಕ್ಕೂ ಸಾಲ ನೀಡಲು ಮುಂದಾಗಬೇಕು: ಎಂ.ಎನ್.ರಾಜೇಂದ್ರಕುಮಾರ್ ಸಲಹೆ

Update: 2019-05-02 17:36 GMT

ಉಡುಪಿ, ಮೇ 2: ಕರಾವಳಿಯಲ್ಲಿ ಸಹಕಾರಿ ರಂಗ ಸಾಕಷ್ಟು ಬಲಿಷ್ಠವಾಗಿದೆ. ಹೀಗಾಗಿ ಸಹಕಾರಿ ರಂಗ, ಸಮಾಜದ ಎಲ್ಲಾ ವರ್ಗಗಳ ಜನರನ್ನು ಆಕರ್ಷಿಸಲು ಮುಂದಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಸಲಹೆ ನೀಡಿದ್ದಾರೆ.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಮುಂದಿನ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಆಡಳಿತ ಮಂಡಳಿ ನಿರ್ದೇಶಕರು, ಅಧ್ಯಕ್ಷರಾಗಿ ಆಯ್ಕೆಯಾದ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಉಪಾಧ್ಯಕ್ಷ ಅಶೋಕ್ ಕೆ.ಬಲ್ಲಾಳ್ ಅವರನ್ನು ಅಭಿನಂದಿಸಲು ನಗರದ ಹೊಟೇಲ್ ಡಯಾನ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ರೈತರಿಗೆ ನೀಡುವ ಸಾಲದೊಂದಿಗೆ ಸಹಕಾರಿ ರಂಗ, ವಿದ್ಯಾ ಕ್ಷೇತ್ರಕ್ಕೂ ಸಾಲ ನೀಡಲು ಹೆಚ್ಚಿನ ಆಸಕ್ತಿ ತೋರಿಸಬೇಕಿದೆ. ಆಸಕ್ತ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕೆ ರಿಯಾಯಿತಿ ದರದ ಬಡ್ಡಿಯೊಂದಿಗೆ ಸಾಲ ನೀಡಬಹುದು ಎಂದವರು ಹೇಳಿದರು.

ಕರಾವಳಿಯ ಎರಡು ಜಿಲ್ಲೆಗಳ ಸಹಕಾರಿಗಳೆಲ್ಲರೂ ಒಟ್ಟಾಗಿದ್ದು, ಸಹಕಾರಿ ಕ್ಷೇತ್ರವನ್ನು ಬೆಳೆಸೋಣ. ಜನರಿಗೆ ಎಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಸಾಧ್ಯವೋ ಅಷ್ಟನ್ನು ನೀಡೋಣ ಎಂದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಸಹಕಾರಿಗಳಿಗೂ ವಯೋಮಿತಿ ನಿರ್ಬಂಧವಿಲ್ಲದೇ, ಮೂರು ದಿನಗಳ ಸಹಕಾರಿ ಕ್ರೀಡಾಕೂಟವನ್ನು ನಡೆಸುವ ಜವಾಬ್ದಾರಿಯನ್ನು ಉಡುಪಿ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯಕರ ಶೆಟ್ಟಿ ಅವರಿಗೆ ವಹಿಸಲಾಗಿದೆ ಎಂದರು.

ಎಲ್ಲಾ ವಯೋಮಾನದ ಸಹಕಾರಿಗಳಿಗೆ ನಡೆಯುವ ಈ ಕ್ರೀಡಾಸ್ಪರ್ಧೆಯಲ್ಲಿ ವಯೋಮಾನಕ್ಕೆ ತಕ್ಕಂತೆ ವಿಭಾಗಗಳಿರುತ್ತವೆ. ಇದರಲ್ಲಿ ಎಲ್ಲರೂ ಸ್ಪರ್ಧಿಸಬೇಕು ಎಂದು ಡಾ.ರಾಜೇಂದ್ರಕುಮಾರ್ ಮನವಿ ಮಾಡಿದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಯೂನಿಯನ್‌ಗೆ ಎಲ್ಲಾ 13 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ. ಸಹಕಾರಿ ಕ್ಷೇತ್ರದ ಪ್ರಗತಿಗೆ ಸಮಸ್ತ ಸಹಕಾರಿ ವರ್ಗದ ಸಲಹೆ, ಸೂಚನೆ, ಬೆಂಬಲವನ್ನು ಯಾಚಿಸಿದರು.

ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಸಹಕಾರಿ ಯೂನಿಯನ್‌ನ ನೂತನ ನಿರ್ದೇಶಕ ಯಶ್ಪಾಲ್ ಸುವರ್ಣ ಅವರು ಮಾತನಾಡಿದರು. ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ, ಅಶೋಕ್‌ಕುಮಾರ್ ಶೆಟ್ಟಿ, ನೂತನ ಉಪಾಧ್ಯಕ್ಷ ಅಶೋಕ ಬಲ್ಲಾಳ್ ಉಪಸ್ಥಿತರಿದ್ದರು. ಸಹಕಾರಿ ಯೂನಿಯನ್‌ನ ಸಿಇಒ ಪುರುಷೋತ್ತಮ್ ಎಸ್.ಪಿ. ಸ್ವಾಗತಿಸಿದರು.

ಅವಿರೋಧ ಆಯ್ಕೆ: ಎ.30ರಂದು ಉಡುಪಿ ಜಿಲ್ಲಾ ಸಹಕಾರಿ ಯೂನಿ ಯನ್‌ಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 13 ಮಂದಿ ನಿರ್ದೇಶಕ ಹೆಸರು ಹೀಗಿದೆ.

ಕಟಪಾಡಿ ಶಂಕರ ಪೂಜಾರಿ ಕಟಪಾಡಿ ವ್ಯವಸಾಯ ಸೇವಾ ಸಹಕಾರ ಸಂಘ ಉಡುಪಿ, ಶ್ರೀಧರ ಪಿ.ಎಸ್. ಸಾಸ್ತಾನ ಸಹಕಾರಿ ವ್ಯವಸಾಯ ಸಂಘ ಸಾಸ್ತಾನ, ಎಚ್.ಗಂಗಾಧರ ಶೆಟ್ಟಿ, ಮಂದಾರ್ತಿ ಸೇವಾ ಸಹಕಾರ ಸಂಘ ಮಂದಾರ್ತಿ, ಕೃಷ್ಣಮೂರ್ತಿ, ಕುಂದಾಪುರ ವ್ಯವಸಾಯ ಸೇವಾ ಸಹಕಾರ ಸಂಘ ಕುಂದಾಪುರ, ಎನ್.ಮಂಜಯ್ಯ ಶೆಟ್ಟಿ ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ವಂಡ್ಸೆ, ಅನಿಲ್ ಎಸ್.ಪೂಜಾರಿ ಮಾಳ ಕೆರ್ವಾಸೆ ವ್ಯವಸಾಯ ಸೇವಾ ಸಹಕಾರ ಸಂಘ ಕಾರ್ಕಳ.

ಹರೀಶ್ ಶೆಟ್ಟಿ ಹಿರ್ಗಾನ ವ್ಯವಸಾಯ ಸೇವಾ ಸಹಕಾರ ಸಂಘ ಹಿರ್ಗಾನ ಕಾರ್ಕಳ, ಹರೀಶ್ ಕಿಣಿ ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘ ಉಡುಪಿ, ಕೆ.ಸುರೇಶ್ ರಾವ್ ಕೆಮ್ಮಣ್ಣು ಹಾಲು ಉತ್ಪಾದಕರ ಸಹಕಾರ ಸಂಘ ನಿಟ್ಟೆ ಕಾರ್ಕಳ, ಅಶೋಕಕುಮಾರ್ ಬಲ್ಲಾಳ್, ಕಾರ್ಕಳ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕಾರ್ಕಳ, ಯಶಪಾಲ್ ಸುವರ್ಣ ಮಹಾಲಕ್ಷ್ಮೀ ಕೋಆಪರೇಟಿವ್ ಬ್ಯಾಂಕ್ ಉಡುಪಿ, ಬಿ.ಜಯಕರ ಶೆಟ್ಟಿ ಇಂದ್ರಾಳಿ ಉಡುಪಿ ಗೃಹನಿರ್ಮಾಣ ಸಹಕಾರ ಸಂಘ ಉಡುಪಿ, ಕೆ. ಕೊರಗ ಪೂಜಾರಿ ಕೋಟ ಮೂರ್ತೆದಾರರ ಸೇವಾ ಸಹಕಾರ ಸಂಘ ಕೋಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News