ಮೇ 4: ಬಸ್ರೂರಿನಲ್ಲಿ ರಾಜ್ಯಮಟ್ಟದ ಸಂಗೀತ ಸ್ಪರ್ಧೆ
ಉಡುಪಿ, ಮೇ 2: ಬಸ್ರೂರಿನ ಕಲಾತರಂಗ ಎರಡನೇ ವರ್ಷದ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ‘ಸಂಗೀತ ಸಮರ 2ಕೆ19’ನ್ನು ಮೇ 4ರ ಶನಿವಾರ ರಾತ್ರಿ ಬಸ್ರೂರಿನ ಬಿ.ಎಂ.ಶಾಲಾ ಆವರಣದಲ್ಲಿ ಹಮ್ಮಿಕೊಂಡಿದೆ ಎಂದು ಕಲಾತರಂಗದ ಅಧ್ಯಕ್ಷ ಓಂಗುರು ತಿಳಿಸಿದ್ದಾರೆ.
ಗುರುವಾರ ಇಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಮೂಲೆಮೂಲೆಗಳಿಂದ ಸುಮಾರು 600ಕ್ಕೂ ಅಧಿಕ ಉದಯೋನ್ಮುಖ ಗಾಯಕರು ಮೊದಲೆರಡು ಸುತ್ತಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಕೊನೆಯಲ್ಲಿ ಒಟ್ಟು ಪ್ರತಿಭಾನ್ವಿತ 13 ಮಂದಿ ಗಾಯಕರನ್ನು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ.
ಈ 13 ಮಂದಿಯ ನಡುವೆ ಶನಿವಾರ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಇದರಲ್ಲಿ ತೀರ್ಪುಗಾರರಾಗಿ ಯುವ ಸಂಗೀತ ನಿರ್ದೇಶಕ, ಎ.ಆರ್. ರೆಹಮಾನ್ ಅವರ ಶಿಷ್ಯ ಉತ್ತಮ್ ಸಾರಂಗ ಹಾಗೂ ಖ್ಯಾತ ಗಾಯಕ ಯಶ್ವಂತ್ ಉಡುಪಿ ಭಾಗವಹಿಸುವರು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಟಿವಿ ಹಾಗೂ ಚಲನಚಿತ್ರರಂಗದ ನಟ,ನಟಿ, ಗಾಯಕ, ನಿರ್ದೇಶಕರು ಪಾಲ್ಗೊಳ್ಳುವರು. ಕಾರ್ಯಕ್ರಮ ಸಂಜೆ 6ಗಂಟೆಗೆ ಪ್ರಾರಂಭಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಾತರಂಗದ ಗೌರವ ಅಧ್ಯಕ್ಷ ನಾಗರಾಜ ಗೋಳಿ, ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ಉಪಸ್ಥಿತರಿದ್ದರು.