ಹಿರಣ್ಣಯ್ಯ ನಿಧನಕ್ಕೆ ಸಂತಾಪ
Update: 2019-05-02 17:41 GMT
ಉಡುಪಿ, ಮೇ 2: ಇಂದು ಬೆಂಗಳೂರಿನಲ್ಲಿ ನಿಧನರಾದ ನಾಡಿನ ಹಿರಿಯ ರಂಗಕರ್ಮಿ, ರಂಗಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರ ಕಣ್ಮರೆಯಿಂದ ಕನ್ನಡ ರಂಗಭೂಮಿ ಹಿರಿಯ ಕಲಾವಿದರನ್ನು ಕಳೆದುಕೊಂಡಂತಾಗಿದೆ ಎಂದು ಉಡುಪಿಯ ನಾಟಕ ಸಂಸ್ಥೆಯ ರಂಗಭೂಮಿ ಪರವಾಗಿ ರವಿರಾಜ್ ಎಚ್.ಪಿ. ಸಂತಾಪ ವ್ಯಕ್ತಪಡಿಸಿದ್ದಾರೆ.
ಲಂಚಾವತಾರದಂಥ ರಾಜಕೀಯ ವಿಡಂಬನಾತ್ಮಕ ನಾಟಕವನ್ನು ನಾಡಿನ ಉದ್ದಗಲಕ್ಕೂ ಜನಪ್ರಿಯಗೊಳಿಸಿದ, ಸಾಮಾಜಿಕ ಪಿಡುಗನ್ನು ನಟನೆಯ ಮೂಲಕ ಎತ್ತಿತೋರಿಸಿ ಇವುಗಳನ್ನು ಹೋಗಲಾಡಿಸಲು ರಂಗಭೂಮಿಯಿಂದ ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಹಿರಣ್ಣಯ್ಯ ಎಂದವರು ಹೇಳಿದ್ದಾರೆ.
ರಂಗಭೂಮಿ ಉಡುಪಿಯಿಂದ ರಂಗಭೂಮಿ ಪ್ರಶಸ್ತಿಯನ್ನು ಹಿರಣ್ಣಯ್ಯ ಸ್ವೀಕರಿಸಿದ್ದರು. ಅವರ ಹಲವು ನಾಟಕಗಳು ಉಡುಪಿಯಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದವು. ಇವರ ನಿಧನದಿಂದ ರಂಗಭೂಮಿಗೆ ಅಪಾರ ನಷ್ಟವಾಗಿದೆ ಎಂದು ರವಿರಾಜ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.