ನಾಪತ್ತೆಯಾಗಿದ್ದ 7 ಮೀನುಗಾರರಿದ್ದ ‘ಸುವರ್ಣ ತ್ರಿಭುಜ’ ಬೋಟಿನ ಅವಶೇಷ ಪತ್ತೆ

Update: 2019-05-03 04:25 GMT

ಕಾರವಾರ, ಮೇ 3: ನಾಲ್ಕೂವರೆ ತಿಂಗಳ ಹಿಂದೆ ಉಡುಪಿಯ ಮಲ್ಪೆ ಬಂದರ್‌ನಿಂದ ಮೀನುಗಾರಿಕೆ ತೆರಳಿದ್ದ ಸುವರ್ಣ ತ್ರಿಭುಜ ಎಂಬ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಮಾಲ್ವಾನ್ ಬಳಿ ಸಮುದ್ರದಲ್ಲಿ ಪತ್ತೆಯಾಗಿರುವುದಾಗಿ ನೌಕಪಡೆಯ ವಕ್ತಾರರು ತಿಳಿಸಿದ್ದಾರೆ.

ಏಳು ಮೀನುಗಾರರೊಂದಿಗೆ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳನ್ನು ಐಎನ್‌ಎಸ್ ನಿರೀಕ್ಷಕ್ ಹಡಗಿನ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ ಎಂದು ನೌಕಪಡೆಯ ವಕ್ತಾರ ಟ್ವೀಟ್ ಮಾಡಿದ್ದಾರೆ.

ಕಳೆದ ಡಿಸೆಂಬರ್ 15ರಂದು ಮಲ್ಪೆಯ ಬಂದರ್‌ನಿಂದ ಮೀನುಗಾರಿಕೆಗೆ ತೆರಳಿದ್ದ ಈ ಬೋಟ್‌ನಲ್ಲಿ ಮಲ್ಪೆಯ ಇಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರಿದ್ದರು. ಸಮುದ್ರದ ಸುಮಾರು 60-70 ಮೀಟರ್ ಆಳದಲ್ಲಿ ಬೋಟಿನ ಅವಶೇಷಗಳನ್ನು ನೌಕಪಡೆಯ ಹೆಲಿಕಾಪ್ಟರ್‌ಗಳು, ಹಡಗುಗಳು ನಿರಂತರ ಶೋಧ ನಡೆಸಿ ಪತ್ತೆ ಹಚ್ಚಿವೆ ಎಂದು ನೌಕಾಪಡೆ ತಿಳಿಸಿದೆ. ಐಎನ್‌ಎಸ್ ನಿರೀಕ್ಷಕ್ ಮೇ 1ರಂದು ಕಾರ್ಯಾಚರಣೆಗಿಳಿದ ವೇಳೆ ಈ ಅವಶೇಷಗಳು ಪತ್ತೆಯಾಗಿವೆ.

ಈ ಮಧ್ಯೆ ಬೋಟಿನಲ್ಲಿದ್ದ 7 ಮೀನುಗಾರರು ಸಮುದ್ರಪಾಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News