ಉಡುಪಿ: ಹಾನಿಗೊಂಡ ಐಎನ್‌ಎಸ್ ಕೊಚ್ಚಿನ್ ಹಡಗಿನ ಚಿತ್ರ ಬಿಡುಗಡೆ

Update: 2019-05-03 14:10 GMT

ಉಡುಪಿ, ಮೇ 3: ಪ್ರಮೋದ್ ಮಧ್ವರಾಜ್ ಅವರು 2018ರ ಡಿ.15ರಂದು ಮಲ್ಪೆಯ ಸುವರ್ಣ ತ್ರಿಭುಜ ಮೀನುಗಾರಿಕಾ ದೋಣಿಗೆ ಢಿಕ್ಕಿ ಹೊಡೆದು ಮುಳುಗಿಸಿದೆ ಎನ್ನಲಾದ ನೌಕಾಪಡೆಗೆ ಸೇರಿದ ಐಎನ್‌ಎಸ್ ಕೊಚ್ಚಿನ್ ಹಡಗಿನ ಹಾನಿಗೊಂಡ ಭಾಗದ ಚಿತ್ರವನ್ನು ಇಂದು ತಮ್ಮ ‘ಫೇಸ್‌ಬುಕ್’ ಪೇಜ್‌ನಲ್ಲಿ ಪ್ರಕಟಿಸಿ ಈ ಬಗ್ಗೆ ವಿವರಣೆ ನೀಡಿದ್ದಾರೆ.

ಅವರು ನೀಡಿದ ವಿವರಣೆ ಇಲ್ಲಿದೆ.

‘ಸುವರ್ಣ ತ್ರಿಭುಜ ದೋಣಿ ನಾಪತ್ತೆ ಪ್ರಕರಣದಲ್ಲಿ ಮೀನುಗಾರರ ಸಾವಿಗೆ ಕಾರಣವಾದ ಮತ್ತು ದೋಣಿಯನ್ನು ದುರಂತಕ್ಕೀಡು ಮಾಡಿದ ನೌಕಾದಳದ ಬೃಹತ್ ಯುದ್ಧ ನೌಕೆ ಐಎನ್‌ಎಸ್ ಕೊಚಿನ್‌ನ ತಳಭಾಗದಲ್ಲಿ ಆಗಿರುವ ಹಾನಿಯ ಚಿತ್ರ ನನಗಿಂದು ಲಭಿಸಿದ್ದು ಅದನ್ನು ನಾನು ಬಿಡುಗಡೆ ಗೊಳಿಸುತಿದ್ದೇನೆ.
ಈ ದೇಶದ ಪ್ರಧಾನಮಂತ್ರಿಯವರು ತಕ್ಷಣ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕಾಗಿ ಕರಾವಳಿಯ ಸಮಸ್ತ ಮೀನುಗಾರರು ಮತ್ತು ಅವರ ಕುಟುಂಬದ ಪರವಾಗಿ ಆಗ್ರಹ ಮಾಡುತ್ತಿದ್ದೇನೆ.

ದೇಶದ ರಕ್ಷಣೆಗೆ ಮತ್ತು ಸಮುದ್ರದಲ್ಲಿ ಮೀನುಗಾರರ ರಕ್ಷಣೆಯ ಜವಾಬ್ದಾರಿ ಹೊತ್ತ ನೌಕೆಯ ಅಧಿಕಾರಿಗಳ ಬೇಜವ್ದಾರಿ ವರ್ತನೆಯಿಂದ ಈ ಘಟನೆ ಸಂಭವಿಸಿದ್ದು ಇದು ಮೀನುಗಾರರ ಕೊಲೆ ಎಂದು ಹೇಳಬೇಕಾಗುತ್ತದೆ.

ಲೋಕಸಭಾ ಚುನಾವಣೆಗೂ ಮೊದಲೆ ಈ ಬಗ್ಗೆ ಮೀನುಗಾರರಿಗೆ ಮಾಹಿತಿ ಸಿಕ್ಕಿದ್ದರೂ ಅದನ್ನು ಕೇಂದ್ರ ರಕ್ಷಣಾ ಇಲಾಖೆ ಮತ್ತು ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಮರೆಮಾಚಿ, ಗೌಪ್ಯವಾಗಿ ಇಡುವ ಪ್ರಯತ್ನ ಮಾಡಲಾಗಿತ್ತು ಎನ್ನುವ ವಿಚಾರವನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ.

ಬಿಜೆಪಿ ನಾಯಕರಿಗೆ ಮತ್ತು ಕೇಂದ್ರ ಸರಕಾರಕ್ಕೆ ತಾಕತ್ತಿದ್ದರೆ ಸುಪ್ರೀಂ ಕೊರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಈ ವಿಚಾರದ ಸತ್ಯಾಸತ್ಯಗಳನ್ನು ಬಹಿರಂಗಪಡಿಸಬೇಕಾಗಿ ನಾನು ಆಗ್ರಹಿಸುತಿದ್ದೇನೆ’ ಎಂದು ಅವರು ‘ಫೇಸ್‌ಬುಕ್’ ಪೇಜ್‌ನಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News