ಮೈಯಲ್ಲೊಂದು ಬೈರಾಸು ಕೈಯ್ಯಲ್ಲಿ ಖಾಲಿ ಬಾಲ್ದಿ, ಮಗ್, ಸಾಬೂನು !

Update: 2019-05-03 14:35 GMT

ಮಂಗಳೂರು, ಮೇ 3: ಮೈ ಮೇಲೆ ಬೈರಾಸು, ಕೈಯ್ಯಲ್ಲಿ ಖಾಲಿ ಬಾಲ್ದಿ, ಮಗ್, ಸಾಬೂನು ! ಇದು ಮಂಗಳೂರು ಮಹಾನಗರ ಪಾಲಿಕೆ ಎದುರು ನಾಗರಿಕರೊಬ್ಬರು ಪಾಲಿಕೆ ಆಡಳಿತದ ವಿರುದ್ಧ ತೋರಿದ ಅಸಹನೆ.

ಇಂದು ಎಂಸಿಸಿ ಸಿವಿಕ್ ಗ್ರೂಪ್‌ನ ಸದಸ್ಯರು ನೀರಿಗಾಗಿ ನಡೆಸಿದ ಪ್ರತಿಭಟನೆಯಲ್ಲಿ ತಂಡದ ಜೆರಾರ್ಡ್ ಟವರ್ಸ್‌ ಅವರು ವಿಭಿನ್ನ ರೀತಿಯಲ್ಲಿ ನೀರಿನ ಸಮಸ್ಯೆಯನ್ನು ತೆರೆದಿಡುವ ಪ್ರಯತ್ನ ಮಾಡಿದರು. ಇದೇ ವೇಳೆ ಅಲ್ಲಿ ಸೇರಿದ್ದ ಗ್ರೂಪ್‌ನ ಸದಸ್ಯರು ಮನಪಾ ವಿರುದ್ಧ ಘೋಷಣೆ, ಧಿಕ್ಕಾರ ಕೂಗಿದರು.
ಪರಶುರಾಮನ ಸೃಷ್ಟಿಯಾದ ನಗರದಲ್ಲಿ ಸಾಕಷ್ಟು ನೀರಿದ್ದರೂ ಮನಪಾ ಆಡಳಿತವು ನೀರು ಪೂರೈಕೆಯನು ಸಮರ್ಪಕವಾಗಿ ನಿರ್ವಹಿಸದೆ ಜನರನ್ನು ಸತಾಯಿಸುತ್ತಿದೆ ಎಂದು ಜೆರಾರ್ಡ್ ಟವರ್ಸ್ ದೂರಿದರು.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಜಿಲ್ಲೆಯಲ್ಲಿಯೇ ನೀರಿನ ರೇಶನಿಂಗ್ ಮಾಡುವ ಪರಿಸ್ಥಿತಿ ಬಂದಿರುವುದು ನಗೆಪಾಟಲಿನ ಸಂಗತಿ ಎಂದವರು ಹೇಳಿದರು.
ನೀರಿನ ಸಮಸ್ಯೆಯನ್ನು ಆಡಳಿತದಿಂದ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಖಾಲಿ ಬಾಲ್ದಿ ಹಿಡಿದು ಮನಪಾ ಎದುರು ಬರುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನೀರು ಸೋರಿಕೆ ನಿಲ್ಲಿಸಿ ನೀರು ಕೊಡಿ ಎಂದು ಒತ್ತಾಯಿಸಿದರು.

ಗ್ರೂಪ್‌ನ ಪದ್ಮನಾಭ ಉಳ್ಳಾಲ್ ಮಾತನಾಡಿ, ನೀರಿನ ಸಮಸ್ಯೆ ಜತೆ ಮಳೆಗಾಲದಲ್ಲಿ ಇದೀಗ ನಾಗರಿಕರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಚರಂಡಿಯ ಹೂಳೆತ್ತುವ ಕಾರ್ಯ ಇನ್ನೂ ನಡೆದಿಲ್ಲ. ಕೇಬಲ್ ಅಳವಡಿಕೆ ಕಾರ್ಯಕ್ಕಾಗಿ ಅಲ್ಲಲ್ಲಿ ಹೊಂಡ ಗುಂಡಿಗಳಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ವಾರ್ಡ್ ಕಮಿಟಿ ರಚಿಸಲು ಸೂಚಿಸಲಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಅಜಯ್ ಡಿಸಿಲ್ವ ಹಾಗೂ ಇತರರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ನಗರದಲ್ಲಿನ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದ ಪ್ರತಿಭಟನಾಕಾರರು ಇತರ 20 ವಿವಿಧ ಸಮಸ್ಯೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News