ಸುಜೀರ್: ಅಕ್ರಮ ಮರಳುಗಾರಿಕಾ ಅಡ್ಡೆಗೆ ಎಎಸ್ಪಿ ತಂಡ ದಾಳಿ
ಬಂಟ್ವಾಳ, ಮೇ 3: ತಾಲೂಕಿನ ಪುದು ಗ್ರಾಮದ ಸುಜೀರ್ ನೇತ್ರಾವತಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕಾ ಅಡ್ಡೆಗೆ ಬಂಟ್ವಾಳ ಉಪ ವಿಭಾಗದ ಎಎಸ್ಪಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳ ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಹಿಟಾಚಿಯಿಂದ ಡ್ರೆಜ್ಜಿಂಗ್ ಮೂಲಕ ನೇತ್ರಾವತಿ ನದಿಯ ಹಿನ್ನೀರಿನಿಂದ ಮರಳು ತೆಗೆದು ಅದನ್ನು ಫಿಲ್ಟರ್ ಮಾಡಿ ಬಳಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಈ ಕಾರ್ಯಾಚರಣೆ ನಡೆಸಿ, ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದೆ.
ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮೂರು ಟಿಪ್ಪರ್ ಲಾರಿಗಳು, ಎರಡು ಹಿಟಾಚಿ, 1 ಜನರೇಟರ್, ಮರಳು ಫಿಲ್ಟರ್ ಮಾಡುವ ಯುನಿಟ್ ಹಾಗೂ ಸುಮಾರು 35 ಲೋಡ್ನಷ್ಟು ಶೇಖರಿಸಿಡಲಾದ ಮರಳನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 1.65 ಕೋ.ರೂ. ಎಂದು ಅಂದಾಜಿಸಲಾಗಿದೆ. ದಾಳಿಯ ವೇಳೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಶರಣೇಗೌಡ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್, ಸಿಬ್ಬಂದಿಗಳಾದ ಹನುಮಂತ, ಉಮೇಶ, ಕುಮಾರ್, ನಝೀರ್, ನಾಗನಾಥ್, ಅಜಿತ್ ಬಂಗೇರಾ, ಕಿರಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.