ಯೆನೆಪೋಯ: ಪ್ರತಿಭಾ ಪುರಸ್ಕಾರ ಸಮಾರಂಭ
ಉಳ್ಳಾಲ: ಯೆನೆಪೋಯ ವಿಶ್ವವಿದ್ಯಾಲಯ ಉನ್ನತ ವ್ಯಾಸಾಂಗಕ್ಕಾಗಿ ವಿದ್ಯಾರ್ಥಿಗಳನ್ನು ಉತ್ತಮ ನಿರ್ದೇಶನದೊಂದಿಗೆ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆ ಯೆನೆಪೋಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಯೆನೆಪೋಯ ಮೊಯ್ದೀನ್ ಕುಂಞಿ ಮೆಮೋರಿಯಲ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಯೆನೆಪೋಯ ಫೌಂಡೇಶನ್ ಹಾಗೂ ಯೆನೆಪೋಯ ವಿ.ವಿ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಶೇ.100 ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿವರ್ಷವೂ ತಂದೆಯವರ ಸ್ಮರಣಾರ್ಥ ಯೆನೆಪೋಯ ಮೊಯ್ದೀನ್ ಕುಂಞಿ ಮೆಮೋರಿಯಲ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಶೈಕ್ಷಣಿಕ ಪುರಸ್ಕಾರ ವಿತರಿಸಲಾಗುತ್ತಿದೆ. ಇದರ ಉಪಯೋಗ ವನ್ನು ಪಡೆದುಕೊಂಡ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹಾರೈಸಿದರು.
ಯೆನೆಪೋಯ ಸಮೂಹ ಸಂಸ್ಥೆಗಳ ಚೇರ್‍ಮೆನ್ ಯೇನೆಪೋಯ ಮಹಮ್ಮದ್ ಕುಂಞಿ ಮುಖ್ಯ ಅತಿಥಿಯಾಗಿದ್ದರು. ಯೆನೆಪೋಯ ವಿ.ವಿ ಕುಲಪತಿ ಡಾ.ಎಂ ವಿಜಯ ಕುಮಾರ್ ಸ್ವಾಗತಿಸಿದರು. ಡಾ.ಗಂಗಾಧರ ಸೋಮಯಾಜಿ ವಂದಿಸಿದರು.
ದ.ಕ , ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶೈಕ್ಷಣಿಕ ವ್ಯಾಸಾಂಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಯೆನೆಪೋಯ ಸಂಸ್ಥೆ ನೀಡುತ್ತಾ ಬಂದಿದೆ. ಪ್ರಶಸ್ತಿಯು ರೂ. 3,000 ದಿಂದ 10,000 ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. 300 ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡಲಾಗಿದೆ. ರೂ.15 ಲಕ್ಷ ವೆಚ್ಚ ಮಾಡಲಾಗಿದೆ. ಜೊತೆಗೆ ಯೆನೆಪೋಯ ಫೌಮಡೇಶನ್ , ಯೆನೆಪೋಯ ಸಮೂಹ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರ ಪ್ರತಿಭಾವಂತ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.
ಯೆನೆಪೋಯ ವಿ.ವಿ ಸಾಮಾಜಿಕ ಕಾಳಜಿಗಾಗಿ ಬಿ.ಡಿ.ಎಸ್, ಬಿ.ಎಸ್ಸಿ(ನರ್ಸಿಂಗ್), ಬಿ.ಪಿ.ಟಿ, ಎಂ.ಪಿ.ಟಿ, ಬಿ.ಫಾರ್ಮ್ ಹಾಗೂ ಇತರೆ ಕೋರ್ಸುಗಳಲ್ಲಿ ಕಲಿಯುತ್ತಿರುವ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಶಯಕ್ಷಣಿಕ ವ್ಯಾಸಾಂಗದಲ್ಲಿ ಪ್ರತಿಭಾನ್ವಿತರಾದ 32 ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರಾಯೋಜಿಸುತ್ತಿದೆ. ಇದರ ಅಂದಾಜು ವೆಚ್ಚ 1,52,36,580 ರೂ. ಆಗಿದೆ. ಮತ್ತು 73 ವಿದ್ಯಾರ್ಥಿಗಳಿಗೆ 2,65,50,750 ರೂ. ಮೊತ್ತದ ಸ್ಕಾಲರ್ ಶಿಪ್ ಅನ್ನೂ ನೀಡಲಾಗಿದೆ. ಈ ಬಾರಿಯ ಪ್ರತಿಭಾ ಪುರಸ್ಕಾರಕ್ಕೆ 1043 ವಿದ್ಯಾರ್ಥಿಗಳು ಮತ್ತು 15 ಶಿಕ್ಷಣ ಸಂಸ್ಥೆಗಳ ಅರ್ಜಿ ಸ್ವೀಕರಿಸಲಾಗಿದೆ ಎಂದು ಯೆನೆಪೋಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.