ಬೈಂದೂರು: ಕ್ಷುಲ್ಲಕ ಕಾರಣಕ್ಕಾಗಿ ತಮ್ಮನಿಂದ ಅಣ್ಣನ ಕೊಲೆ; ದೂರು ದಾಖಲು
ಬೈಂದೂರು, ಮೇ 3: ಕ್ಷುಲ್ಲಕ ಕಾರಣಕ್ಕಾಗಿ ತಮ್ಮ ತನ್ನ ಅಣ್ಣನನ್ನೇ ಕೊಲೆ ಮಾಡಿದ್ದಾನೆ ಎನ್ನಲಾದ ಘಟನೆ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಬವಳಾಡಿ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಕೊಲೆಗೀಡಾದವರನ್ನು ಬವಳಾಡಿ ಮೇಲ್ಮಕ್ಕಿ ಚೌಕಿ ನಿವಾಸಿ ಕುಪ್ಪ ಕೊರಗ ಎಂಬವರ ಮಗ ನಾಗರಾಜ (47) ಎಂದು ಗುರುತಿಸಲಾಗಿದೆ. ಆರೋಪಿ ಆತನ ಸಹೋದರ ಸಂತೋಷ (20) ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ಮಹಿಳೆಯರು, ಮಕ್ಕಳು ತಿರುಗಾಡುವ ಸ್ಥಳದಲ್ಲಿ ಒಳ ಒಡುಪು ಹಾಕುವ ಬಗ್ಗೆ ಅಣ್ಣ ಆಕ್ಷೇಪಿಸಿದಕ್ಕೆ ತಮ್ಮ ಸಂತೋಷ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇವರಿಬ್ಬರು ಕೂಲಿ ಕೆಲಸ ಮಾಡಿಕೊಂಡಿದ್ದು ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬರುವಾಗ ಕುಡಿದು ಬಂದಿದ್ದರು. ರಾತ್ರಿ ಸಂತೋಷ ಕೇವಲ ಒಳ ಉಡುಪಿನಲ್ಲಿ ಮನೆಯ ಬಳಿ ತಿರುಗುತ್ತಿದ್ದು, ಇದನ್ನು ಅಣ್ಣ ನಾಗರಾಜ ಆಕ್ಷೇಪಿಸಿದ್ದರು. ಇದಕ್ಕೆ ಕೋಪಗೊಂಡ ಸಂತೋಷ ಮನೆಯಲ್ಲಿದ್ದ ಉರುಗೋಲಿನಿಂದ ಅಣ್ಣನ ತಲೆಗೆ ಹೊಡೆದ ಎನ್ನಲಾಗಿದೆ ಇದರಿಂದ ಗಂಭೀರ ಗಾಯಗೊಂಡ ನಾಗರಾಜ ಮೃತಪಟ್ಟರೆಂದು ದೂರಲಾಗಿದೆ. ಕೊಲೆಯಾದ ನಾಗರಾಜನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಶಾ ಜೇಮ್ಸ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.