ಉಡುಪಿ: ಹರಿಕೃಷ್ಣ ಶಿವತ್ತಾಯರಿಗೆ ಬೀಳ್ಕೊಡುಗೆ

Update: 2019-05-04 12:46 GMT

ಉಡುಪಿ, ಮೇ 4: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ 40 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಉಡುಪಿ ತಾಲೂಕು ಪಂಚಾಯತ್‌ನ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಇವರ ಬೀಳ್ಕೊಡುಗೆ ಸಮಾರಂಭ ಗುರುವಾರ ಅಂಬಲಪಾಡಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಮತ್ತು ತರಬೇತಿ ಸಂಸ್ಥೆ ಪ್ರಗತಿಸೌಧದಲ್ಲಿ ನಡೆಯಿತು.

40 ವರ್ಷಗಳ ಕಾಲ ಇಲಾಖೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು, ಉತ್ತಮ ಸಂಘಟಕ ಮತ್ತು ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಿ ಕೊಂಡಿದ್ದರು. ಉಡುಪಿ ಶಾಸಕರ ಆಪ್ತ ಸಹಾಯಕ, ಸಂಸದರ ಆಪ್ತ ಸಹಾಯಕ ರಾಗಿ ಸಹ ಕಾರ್ಯ ನಿರ್ವಹಿಸಿದ್ದ ಇವರು, ಪಂಚಾಯತ್ ವ್ಯವಸ್ಥೆಯಲ್ಲಿ ಕೆಳಹಂತದ ನೌಕರರ ಸಮಸ್ಯೆಗಳಿಗೆ ದನಿಯಾಗಿದ್ದು, ನೌಕರರ ಖಾಯಂಮಾತಿ ಬಗ್ಗೆ, ಪದೋನ್ನತಿ ಬಗ್ಗೆ, ವೇತನ ಸಮಸ್ಯೆ ಬಗ್ಗೆ ಹೋರಾಟ ನಡೆಸಿದ್ದರು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಯುವ ಪಿಡಿಓಗಳಿಗೆ ಹರಿಕೃಷ್ಣ ಶಿವತ್ತಾಯರ ಕಾರ್ಯ ವೈಖರಿ ಮಾದರಿಯಾಗಬೇಕು. ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಹ ಸ್ವೀಪ್ ಕಾರ್ಯ ಚಟುವಟಿಕೆ ಯಲ್ಲಿ ಆಸಕ್ತಿಯಿಂದ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತಿ ನಂತರವೂ ಇವರ ಅನುಭವ ಸೇವೆಯನ್ನು ಪಡೆಯುವ ಬಗ್ಗೆ ಕ್ರವು ಕೈಗೊಳ್ಳಲಾಗುವುದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿಕೃಷ್ಣ ಶಿವತ್ತಾಯ, ಪಂಚಾಯತ್ ನೌಕರರು ಸಾರ್ವಜನಿಕರ ಸಮಸ್ಯೆಗಳನ್ನು ಸಹನೆಯಿಂದ ಆಲಿಸಿ, ತಕ್ಷಣಕ್ಕೆ ಸ್ಪಂದಿಸಬೇಕು. ಯಾವುದೇ ಸಮಯದಲ್ಲೂ ತಮ್ಮ ಮೊಬೈಲ್ ಸ್ವಿಚ್ ಆಪ್ ಮಾಡದೇ ಸದಾ ಸಾರ್ವಜನಿಕ ಸೇವೆಗೆ ಸಿದ್ದರಿದ್ದು, ನಿಯಮಗಳಿಗೆ ಅನುಗುಣ ವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತರಾದ ಚಂದ್ರಶೇಖರ ಭಟ್, ಶ್ರೀನಿವಾಸ ಭಟ್, ಉದಯಕುಮಾರ್ ಶೆಟ್ಟಿ ಇವರನ್ನು ಸಹ ಸನ್ಮಾನಿಸಲಾಯಿತು.
ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕಾರ್ಕಳ ತಾಪಂ ಕಾರ್ಯ ನಿರ್ವಹಣಾ ಧಿಕಾರಿ ಮೇ.ಹರ್ಷ, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್, ಸುಂದರ್ ಪ್ರಭು, ಮೋಹಿನಿ ಹರಿಕೃಷ್ಣ ಶಿವತ್ತಾಯ ಮತ್ತಿತರರು ಉಪಸ್ಥಿತರಿದ್ದರು.

ಪಿಡಿಓ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News