ಮೇ 6ರಿಂದ ಶ್ರೀಹಂಡೆದಾಸ ಪ್ರತಿಷ್ಠಾನದ ವಾರ್ಷಿಕೋತ್ಸವ
ಉಡುಪಿ, ಮೇ 4: ಪರ್ಯಾಯ ಪಲಿಮಾರು ಮಠ ಶ್ರೀಕೃಷ್ಣ ಮಠ ಹಾಗೂ ಕಾರ್ಕಳ ಶ್ರೀಹಂಡೆದಾಸ ಪ್ರತಿಷ್ಠಾನದ ಆಶ್ರಯದಲ್ಲಿ ವಾರ್ಷಿಕೋತ್ಸವ ಸಮಾ ರಂಭವನ್ನು ಮೇ 6ರಿಂದ ಮೇ 8ರವರೆಗೆ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.
ಮೇ 6ರಂದು ಸಂಜೆ 7ಗಂಟೆಗೆ ಕಾರ್ಯಕ್ರಮವನ್ನು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ವಹಿಸಲಿ ರುವರು. 8ರಂದು ಸಂಜೆ 7ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು ಎಂದು ಪ್ರತಿಷ್ಠಾನದ ಅಧ್ಯಕ್ಷೆ ರುಕ್ಮಿಣಿ ಹಂಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಂಜೆ 7ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ‘ಅಹಲ್ಯೋದ್ಧಾರ’ ಪೌರಾಣಿಕ ನಾಟಕ, ಮಹಿಳೆಯರು ಮತ್ತು ಮಕ್ಕಳಿಂದ ‘ಚಂಪಕ ವಿಜಯ’ ಯಕ್ಷಗಾನ ಹಾಗೂ ಮಕ್ಕಳಿಂದ ‘ಶ್ರೀವರಾಹ ನರಸಿಂಹ’ ನಾಟಕ ಪ್ರದರ್ಶನಗೊಳ್ಳಲಿದೆ. ಸುದ್ದಿಗೋಷ್ಠಿಯಲ್ಲಿ ಪ್ರೊ.ಎಂ.ಎಲ್.ಸಾಮಗ, ಎಸ್.ಎ.ಕೃಷ್ಣಯ್ಯ, ವನಿತಾ ಉಪಾಧ್ಯಾಯ, ಸುಮಿತ್ರಾ ಉಪಸ್ಥಿತರಿದ್ದರು.