ಸುವರ್ಣ ತ್ರಿಭುಜ ಬೋಟ್ ಅವಶೇಷಗಳ ಕುರಿತ ಸ್ಪಷ್ಟ ಮಾಹಿತಿಗಾಗಿ ಎಸ್ಪಿಯಿಂದ ಕಾರವಾರ ನೌಕಸೇನೆಗೆ ಪತ್ರ
ಉಡುಪಿ, ಮೇ 4: ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದ 33ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳ ಕುರಿತ ಸ್ಪಷ್ಟ ಮಾಹಿತಿಯನ್ನು ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮೇ 3ರಂದು ಕಾರವಾರ ನೌಕಪಡೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ತನಿಖೆಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಶಾಸಕರು, ತಜ್ಞರು, ಮೀನುಗಾರರ ತಂಡ ನೌಕಸೇನೆಯ ಐಎನ್‌ಎಸ್ ನಿರೀಕ್ಷಕ್ ನೌಕೆಯಲ್ಲಿ ಎ. 27ರಂದು ಸಮುದ್ರಕ್ಕೆ ತೆರಳಿದ್ದರು. ಮೇ 2ರಂದು ನೌಕಸೇನೆಯ ಸ್ಪೋಕ್‌ಪರ್ಸನ್ ಟ್ವೀಟರ್‌ನಲ್ಲಿ ಬೋಟಿನ ಅವಶೇಷ ಪತ್ತೆ ಯಾಗಿರುವುದಾಗಿ ಸಂದೇಶ ಹಾಕಿದ್ದರು ಎಂದು ಎಸ್ಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇ1ರಂದು ಮಾಲ್ವಾನ್ ಪ್ರದೇಶದ ವ್ಯಾಪ್ತಿಯ ಆಳ ಸಮುದ್ರದಲ್ಲಿ ಸೋನಾರ್ ತಂತ್ರಜ್ಞಾನದ ಮೂಲಕ ಪ್ರತಿಧ್ವನಿಯನ್ನು ಗುರುತಿಸಿ ಸ್ಥಳದಲ್ಲಿ ಶೋಧನೆ ನಡೆಸುವಂತೆ ನೌಕಸೇನೆಯ ಮುಳುಗು ತಜ್ಞರನ್ನು ಕೋರಿಕೊಂಡ ಹಿನ್ನೆಲೆಯಲ್ಲಿ ಸುಮಾರು 60 ಮೀಟರ್ ಆಳದಲ್ಲಿ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆಯಾಗಿದ್ದು, ಅದನ್ನು ತಂಡದಲ್ಲಿದ್ದ ಮೀನುಗಾರರ ಸಂಬಂಧಿ ಕರು ಗುರುತಿಸಿರುವುದಾಗಿ ಶಾಸಕ ಕೆ.ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೋಟು ಅವಶೇಷ ಪತ್ತೆಯಾಗಿರುವ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಕಾರವಾರ ನೌಕನೆಲೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅಧಿಕಾರಿಗಳಿಂದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.