ಬೈಂದೂರು: ಗ್ಯಾಸ್ ಬಳಸಿ ಎಟಿಎಂನಲ್ಲಿನ ಹಣ ಕಳವಿಗೆ ಯತ್ನ
Update: 2019-05-04 16:37 GMT
ಬೈಂದೂರು, ಮೇ 4: ಬೈಂದೂರು ಜಂಕ್ಷನ್ ಬಳಿಯ ಕೆನರಾ ಬ್ಯಾಂಕಿನ ಎಟಿಎಂ ಯಂತ್ರದಲ್ಲಿದ್ದ ಹಣವನ್ನು ಗ್ಯಾಸ್ ಬಳಸಿ ಕಳವಿಗೆ ಯತ್ನಿಸಿರುವ ಘಟನೆ ಮೇ 3ರಂದು ರಾತ್ರಿ ವೇಳೆ ನಡೆದಿದೆ.
ಯಂತ್ರದಲ್ಲಿದ್ದ ಹಣವನ್ನು ಕಳವು ಮಾಡುವ ಉದ್ದೇಶದಿಂದ ಕಳ್ಳರು, ಗ್ಯಾಸ್ ಉಪಯೋಗಿಸಿ ಎಟಿಎಂನ ಎದುರು ಭಾಗವನ್ನು ಬೆಂಕಿಯಿಂದ ಸುಟ್ಟು ಕಳವಿಗೆ ಪ್ರಯತ್ನಿಸಿ ವಿಫಲರಾಗಿರುವುದು ಕಂಡುಬಂದಿದೆ. ಈ ಘಟನೆಯು ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ.
ಎಟಿಎಂ ಕೋಣೆಯ ಒಳಗಡೆ ಕಳ್ಳತನಕ್ಕೆ ಬಳಸಿದ ಭಾರತ್ ಗ್ಯಾಸ್ ಕಂಪೆನಿಯ ಗೃಹ ಬಳಕೆಯ ಒಂದು ಸಿಲಿಂಡರ್ ಹಾಗೂ ರೆಗ್ಯುಲೇಟರ್‌ನ್ನು ಕಳ್ಳರು ಬಿಟ್ಟು ಹೋಗಿದ್ದಾರೆ. ದುಷ್ಕರ್ಮಿಗಳು ನಡೆಸಿದ ಈ ಕೃತ್ಯದಿಂದ ಎಟಿಎಂ ಯಂತ್ರ ಜಖಂಗೊಂಡಿದ್ದು ಸುಮಾರು 1.25ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.