ಸಮಾಜದ ಋಣವನ್ನು ಸಲ್ಲಿಸುವ ಸಾಧಕರಾಗಿ: ಡಾ. ಎಸ್. ಸಚ್ಚಿದಾನಂದ
ಮೂಡುಬಿದಿರೆ: ಯುವ ಪದವೀಧರರು ವೃತ್ತಿ, ಜೀವನದಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಬದ್ಧತೆಯೊಂದಿಗೆ ರಾಷ್ಟ್ರದ ಉತ್ತಮ ನಾಗರಿಕರಾಗಬೇಕಾಗಿದೆ. ಬದುಕಿನ ಎಲ್ಲ ಹಂತಗಳಲ್ಲಿ ಹೆತ್ತವರು, ಸ್ನೇಹಿತರು ಮತ್ತು ಶಿಕ್ಷಕರಿಂದ ಪಡೆದಿರುವುದನ್ನು ಸಮಾಜಕ್ಕೆ ಮರಳಿ ಸಲ್ಲಿಸುವಂತಾಗಬೇಕು. ಮುಗ್ಧತೆಯಿಂದ ಜವಾಬ್ದಾರಿಯುತ ನಾಗರಿಕರಾಗಿ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಉಪ ಕುಲಪತಿ ಡಾ. ಎಸ್. ಸಚ್ಚಿದಾನಂದ ಹೇಳಿದರು.
ಅವರು ವಿದ್ಯಾಗಿರಿಯ ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪದವಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಪದವಿ ಪ್ರದಾನ 2019ರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಣಕ್ಕೆ ಫಲವತ್ತಾದ ಭೂಮಿಯಾಗಿ ಚಿನ್ನದ ಗಣಿಯಾಗಿ ಬೆಳೆದಿರುವ ಆಳ್ವಾಸ್ ಶಿಕ್ಷಣ, ಕಲೆ, ಸಂಸ್ಕೃತಿಯ ತ್ರಿವೇಣಿ ಸಂಗಮವಾಗಿ ದೇಶದ ಏಳಿಗೆಗೆ ಶಿಕ್ಷಣದ ಮೂಲಕ ದೊಡ್ಡ ಕೊಡುಗೆ ಸಲ್ಲಿಸುತ್ತಿದೆ. ರಜತ ಮಹೋತ್ಸವ ಸಂಭ್ರಮದಲ್ಲಿರುವ ರಾಜೀವಗಾಂಧಿ ವಿಜ್ಞಾನ ವಿವಿಯ ಪರವಾಗಿ ರಾಷ್ಟ್ರಮಟ್ಟದ ಸಾಂಸ್ಕøತಿಕ ಮತ್ತು ಕ್ರೀಡಾ ಉತ್ಸವವನ್ನು ಆಳ್ವಾಸ್ ನಡೆಸಿಕೊಡಬೇಕು ಎಂದವರು ಕೋರಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉಪಸ್ಥಿತರಿದ್ದರು. ಮಂಗಳೂರು ವಿವಿ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ, ವಿಶ್ವೇಶರಾಯ ತಾಂತ್ರಿಕ ವಿವಿ ಹೀಗೆ ಮೂರು ವಿವಿಗಳಲ್ಲಿಯೂ ಆಳ್ವಾಸ್ ಕ್ರೀಡೆ, ಕಲಿಕೆ, ಸಾಂಸ್ಕೃತಿಕ ಚಾಂಪಿಯನ್ ಆಗಿರುವುದು ಸಂಸ್ಥೆಯ ಸ್ಮರಣೀಯ ಸಾಧನೆ ಎಂದರು. ಮಂಗಳೂರು ವಿವಿ(1398) ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ(388), ವಿಶ್ವೇಶರಯ್ಯ ತಾಂತ್ರಿಕ ವಿವಿ(620)ಯ ವ್ಯಾಪ್ತಿಗೆ ಬರುವ ಆಳ್ವಾಸ್‍ನ ಶಿಕ್ಷಣ ಸಂಸ್ಥೆಗಳ ಒಟ್ಟು 2406 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಎಂ.ವಿವೇಕ್ ಆಳ್ವ, ಟ್ರಸ್ಟಿಗಳಾದ ಜಯಶ್ರೀ,ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಾಗತಿಸಿದರು. ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ಶೃತಿ ಕಾರ್ಯಕ್ರಮ ನಿರ್ವಹಿಸಿ ಆಳ್ವಾಸ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಭಾಗದ ಪ್ರಾಚಾರ್ಯ ಡಾ.ವರ್ಣನ್ ಡಿ.ಸಿಲ್ವಾ ವಂದಿಸಿದರು.