ಚರ್ಚ್ ಎದುರು ಶಾಂತಿ-ಏಕತೆಗೆ ಬೆಂಬಲ ಸೂಚಿಸಿದ ಮಂಗಳೂರಿನ ಮುಸ್ಲಿಮರು
ಮಂಗಳೂರು, ಮೇ 5: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಇಂದು ಬೆಳಗ್ಗೆ ಮಂಗಳೂರಿನ ಮುಸ್ಲಿಮರು ನಗರದ ಮಿಲಾಗ್ರಿಸ್ ಚರ್ಚ್ ಆವರಣದಲ್ಲಿ ಜಮಾಯಿಸಿ ಶಾಂತಿ ಮತ್ತು ಏಕತೆಗೆ ಬೆಂಬಲ ಕೋರಿದರು.
ಇಂದು ಬೆಳಗ್ಗೆ ಚರ್ಚ್‌ನಲ್ಲಿ ಪೂಜೆ ಸಂದರ್ಭ ಚರ್ಚ್‌ನ ಹೊರಗಡೆ ಸೇರಿದ ನೂರಾರು ಮುಸ್ಲಿಮರು ‘‘ಶ್ರೀಲಂಕಾದವರೊಂದಿಗೆ ನಾವಿದ್ದೇವೆ’’, ಭಯೋತ್ಪಾದನೆ ಧರ್ಮವಿಲ್ಲ ಇತ್ಯಾದಿ ಭಿತ್ತಿಪತ್ರ ಫಲಕಗಳನ್ನು ಪ್ರದರ್ಶಿಸಿ ಏಕತೆಯ ಸಂದೇಶ ಸಾರಿದರು. ಇದಕ್ಕೆ ಕ್ರೈಸ್ತರು ಸ್ಪಂದಿಸಿ ‘‘ನಿಮ್ಮೆಂದಿಗೆ ನಾವಿದ್ದೇವೆ’’ ಎಂದು ಉದ್ಘೋಷ ಕೂಗುವ ಮೂಲಕ ಬೆಂಬಲ ಸೂಚಿಸಿದರು.
ಮಿಲಾಗ್ರಿಸ್ ಆವರಣದಲ್ಲಿ ನೆರೆದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಚರ್ಚ್‌ನ ಧರ್ಮಗುರು ಫಾ.ವಲೆರಿಯನ್ ಡಿಸೋಜ, ಏಕತೆಯ ಸಂದೇಶ ಸಾರಿದ ಮುಸ್ಲಿಮರ ಕ್ರಮವನ್ನು ಶ್ಲಾಘಿಸಿದರು. ಇದೊಂದು ಐತಿಹಾಸಿಕ ಕ್ಷಣ. ಇದರಲ್ಲಿ ಭಾಗಿಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಶಾಂತಿಯೇ ತನ್ನ ಮಂತ್ರವೆನ್ನುವ ಮುಸ್ಲಿಮರು ಭಯೋತ್ಪಾದನಾ ಚಟುವಟಿಕೆಯನ್ನು ತೀವ್ರವಾಗಿ ಖಂಡಿಸುತ್ತಿರುವುದು ಕ್ರೈಸ್ತರ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಕ್ರೈಸ್ತರೆಲ್ಲ ಶಾಂತಿಗಾಗಿ, ಪ್ರೀತಿಗಾಗಿ, ಸಂಘಟನೆಗಾಗಿ ಹೋರಾಡಲಿದ್ದಾರೆ. ಈ ಹೋರಾಟಕ್ಕೆ ಮುಸ್ಲಿಮರ ಬೆಂಬಲ ಸೂಚಿಸಿರುವುದು ನಮಗೆ ಸಹಸ್ರ ಆನೆಬಲ ನೀಡಿದೆ. ಎಲ್ಲ ಸಮುದಾಯಗಳು ಪರಸ್ಪರ ಪ್ರೀತಿಯಿಂದ ಬದುಕು ಬಾಳಬೇಕು ಎಂದು ಕರೆ ನೀಡಿದರು.
ಮುಸ್ಲಿಮರ ಪರ ಮಾತನಾಡಿದ ಸೈಫ್ ಸುಲ್ತಾನ್, ಮುಸ್ಲಿಮ್ ಧರ್ಮವು ಶಾಂತಿ-ಐಕ್ಯವನ್ನು ಸದಾ ಬೆಂಬಲಿಸುತ್ತದೆ. ಸಮುದಾಯಗಳು ಎಲ್ಲ ಸಂದರ್ಭಗಳಲ್ಲೂ ಏಕತೆಯಿಂದ ಕೂಡಿದ್ದರೆ ಸಂತಸದ ಜೀವನ ನಡೆಸಬಹುದು. ನೆರೆಹೊರೆಯರು, ಸಮುದಾಯಗಳನ್ನು ಪ್ರೀತಿಸಬೇಕು ಎಂದರು ಹೇಳಿದರು.
ಫ್ಲೋರಿನ್ ಹಿಸ್ಲೊ ಎಂಬವರು ಮಾತನಾಡಿ, ಧರ್ಮಗಳಿಗಿಂತ ಮಾನವೀಯತೆ ಮಿಗಿಲಾದದ್ದು. ಉದ್ವಿಗ್ನ ಪರಿಸ್ಥಿತಿಯಲ್ಲೂ ಮುಸ್ಲಿಮರು ಕ್ರೈಸ್ತರಿಗೆ ಬೆಂಬಲ ಕೋರುತ್ತಿರುವುದು ಆಶಾದಾಯಕ ಬೆಳವಣಿಗೆ. ನಾವೆಲ್ಲರೂ ಮಾನವರು ಇರುವಷ್ಟು ದಿನಗಳಲ್ಲಿ ಪರಸ್ಪರ ಪ್ರೀತಿ, ಸ್ನೇಹದಿಂದ ಕೂಡಿರಬೇಕು ಎಂದರು.
ಫಾ.ಎಡ್ವಿನ್ ಮೊನಿಸ್ ಮಾತನಾಡಿ ಶಾಂತಿ, ಏಕತೆಗೆ ಕರೆ ನೀಡಿದರು. ಶಾಂತಿ-ಐಕ್ಯತೆಗೆ ಬೆಂಬಲ ಕೋರುವ ಸಭೆಯ ನೇತೃತ್ವವನ್ನು ಸೈಫ್ ಸುಲ್ತಾನ್ ಹಾಗೂ ಆಸಿಫ್ ಡೀಲ್ ವಹಿಸಿದ್ದರು.
‘ಭಯೋತ್ಪಾದನೆಗೆ ಧರ್ಮವಿಲ್ಲ’, ‘ಅನೇಕತೆಯಲ್ಲಿ ಏಕತೆ’, ‘ಕ್ರೈಸ್ತರ ಜತೆ ಮುಸ್ಲಿಮರು’, ‘ಭಯ ಉತ್ಪಾದಕರೊಂದಿಗೆ ನಾವಿಲ್ಲ, ಶ್ರೀಲಂಕಾದವರೊಂದಿಗೆ ನಾವೆಲ್ಲ’, ‘ನ್ಯೂಝಿಲ್ಯಾಂಡ್‌ನಿಂದ ಶ್ರೀಲಂಕಾದವರೆಗೂ ಶಾಂತಿಮಂತ್ರದಲ್ಲಿ ನಾವೆಲ್ಲಾ ಸಂಘಟಿತರು’, ‘ಮುಸ್ಲಿಮರು ನಿಮ್ಮಿಂದಿಗೆ’ ಹೆಸರಿನ ಬಿತ್ತಿ ಫತ್ರದ ಫಲಕಗಳನ್ನು ಪ್ರದರ್ಶಿಸಿ, ಶಾಂತಿ-ಏಕತೆಗೆ ಬೆಂಬಲ ಕೋರಲಾಯಿತು.
ಈ ಸಂದರ್ಭದಲ್ಲಿ ಕೆಸಿಸಿಐ ಅಧ್ಯಕ್ಷ ಪಿ.ಅಬ್ದುಲ್ ಹಮೀದ್, ಆಝಾದ್ ಗ್ರೂಪ್‌ನ ಮನ್ಸೂರ್ ಅಹ್ಮದ್, ಖಾಸಿಮ್ ಅಹ್ಮದ್, ಆಬಿದ್ ಮತ್ತಿತರರಿದ್ದರು.