ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಬಡ ದಲಿತ ಕುಟುಂಬಕ್ಕೆ ಮನೆ ನಿರ್ಮಾಣ
ಉಡುಪಿ, ಮೇ 5: ತೋನ್ಸೆ ಗ್ರಾಮದ ಪಡುಕುದ್ರುವಿನಲ್ಲಿ ತೀರಾ ದುಸ್ಥಿತಿಯ ಮನೆಯಲ್ಲಿ ವಾಸಿಸುತ್ತಿದ್ದ ಬಡ ದಲಿತ ಸಮುದಾಯದ ಭಾಸ್ಕರ ಎಂಬವರ ಕುಟುಂಬಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕ ವತಿಯಿಂದ ಗುಣಮಟ್ಟದ ಮನೆಯನ್ನು ನಿರ್ಮಿಸಿಕೊಡಲಾಯಿತು.
ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರ್ ಅಲಿ ನೂತನ ಮನೆಯ ಕೀಲಿ ಕೈ ಭಾಸ್ಕರ್ ಅವರಿಗೆ ಹಸ್ತಾಂತರಿಸಿದರು. 5,92,000 ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಮನೆಗೆ ಜಮಾಅತೆ ಇಸ್ಲಾಮಿ ಹಿಂದ್ 4,42,000 ರೂ. ಭರಿಸಿದರೆ, ಸರಕಾರದ ವಸತಿ ಯೋಜನೆಯಿಂದ 1,50,000 ರೂ. ಸಹಾಯ ಧನವನ್ನು ಪಡೆಯಲಾಗಿತ್ತು.
ಬಳಿಕ ಮಾತನಾಡಿದ ಅಕ್ಬರ್ ಅಲಿ, ಈ ಕೆಲಸ ದೇವರ ವಿಶ್ವಾಸದ ಭಾಗವಾಗಿದೆ. ಮನುಷ್ಯನು ಪರಸ್ಪರ ಸಹಕರಿಸಿ ಸಮಾಜದಲ್ಲಿ ವಂಚಿತರಿಗೆ ನೆರವಾಗಿ ಜೀವಿಸುವುದೇ ಮಾನವೀಯತೆ ಎಂದು ಹೇಳಿದರು.
ಉಡುಪಿ ಜಿಪಂ ಸದಸ್ಯ ಜನಾರ್ದನ್ ತೋನ್ಸೆ ಮಾತನಾಡಿ, ಜಮಾಅತೆ ಇಸ್ಲಾಮಿನ ಸಮಾಜ ಸೇವಾ ಕಾರ್ಯ ಶ್ಲಾಘನೀಯ. ಹೆಸರಿಗೊಂದು ಮನೆ ಮಾಡದೆ ತಮ್ಮ ಸ್ವಂತ ಮನೆಯಂತೆ ಕಾಳಜಿ ವಹಿಸಿ ಗುಣಮಟ್ಟದ ಮನೆ ನಿರ್ಮಿಸಿಕೊಟ್ಟಿದ್ದಾರೆ. ಇದು ಮುಖ್ಯ ಮತ್ತು ಅನುಕರಣೀಯ ಎಂದರು.
ದಲಿತ ದಮನಿತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ ಮಾತನಾಡಿ, ಜಮಾಅತೆ ಇಸ್ಲಾಮಿನವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಕಡೆಗೆ ತಮ್ಮ ಸೇವಾ ಕಾರ್ಯವನ್ನು ಒಯ್ದಿದ್ದಾರೆ. ಇದು ನಿಜವಾದ ಆರಾಧನೆಯೇ ಹೊರತು ದೇವಾಲಯಕ್ಕೆ ಚಿನ್ನದ ಕಿರೀಟ ನೀಡುವುದಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯೆ ಸುಲೋಚನ, ಸ್ಥಳೀಯ ಪಂಚಾಯತ್ ಸದಸ್ಯ ಗುರುರಾಜ್ ರಾವ್ ಶುಭ ಹಾರೈಸಿದರು.
ಎಸ್‌ಐಒ ಕರ್ನಾಟಕ ರಾಜ್ಯ ಅಧ್ಯಕ್ಷ ನಿಹಾಲ್ ಕಿದಿಯೂರ್, ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಕೆ. ಅಬ್ದುಲ್ ಖಾದಿರ್, ಹ್ಯೂಮನೇಟೆರಿಯನ್ ರಿಲೀಫ್ ಸೊಸೈಟಿಯ ಮುಹಮ್ಮದ್ ಮರಕಡ, ಗ್ರಾಪಂ ಸದಸ್ಯರಾದ ಜನೆವಿವ್ ಪಿಂಟೊ, ವೆಂಕಟೇಶ್ ಕುಂದರ್, ಅಶ್ಫಾಕ್ ಹೂಡೆ, ಶ್ರೀಧರ, ಮಾಜಿ ಅಧ್ಯಕ್ಷೆ ಜ್ಯೋತಿ ಲುವಿಸ್, ಮಾಜಿ ಉಪಾಧ್ಯಕ್ಷ ಸಾದಿಕ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.