ಬಜೆಯಲ್ಲಿ ನೀರು ಖಾಲಿ: ಡ್ರೆಜ್ಜಿಂಗ್ ಕಾರ್ಯ ಆರಂಭ
ಉಡುಪಿ, ಮೇ 5: ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವರ್ಣ ನದಿಯಲ್ಲಿ ಡ್ರೆಜ್ಜಿಂಗ್ ಕಾರ್ಯವನ್ನು ಇಂದಿನಿಂದ ಆರಂಭಿಸಲಾಗಿದೆ.
ಶಿರೂರು ಅಣೆಕಟ್ಟಿನಿಂದ ಬಜೆ ಅಣೆಕಟ್ಟಿನವರೆಗೆ ಅಲ್ಲಲ್ಲಿ ನಿಂತಿರುವ ನೀರನ್ನು ಡ್ರೆಜ್ಜಿಂಗ್ ಮೂಲಕ ಹಾಯಿಸಿ ನಗರಕ್ಕೆ ನೀರು ಸರಬರಾಜು ಮಾಡಲು ನಗರ ಸಭೆ ಕಾರ್ಯಪ್ರವೃತ್ತವಾಗಿದೆ. ಇದರಿಂದಾಗಿ ಮೇ5 ಮತ್ತು ಮೇ6 ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಮೇ 7ರಿಂದ ನೀರು ಸರಬರಾಜು ಮಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಇಂದು ಹಿರಿಯಡ್ಕ ಸಮೀಪದ ಭಂಡಾರಿಬೆಟ್ಟು ಎಂಬಲ್ಲಿ ಡ್ರೆಜ್ಜಿಂಗ್ ಕಾರ್ಯ ನಡೆಯುತ್ತಿದ್ದು, ನಾಳೆ ಕೂಡ ಮುಂದುವರೆಯಲಿದೆ. ಅಲ್ಲದೆ ಶಿರೂರು ಗುಂಡಿ ಹಾಗೂ ಶಿರೂರು ಅಣೆಕಟ್ಟಿನ ಪ್ರದೇಶದಲ್ಲೂ ಡ್ರೆಜ್ಜಿಂಗ್ ಕಾರ್ಯ ನಡೆಸಿ ನೀರು ಹಾಯಿಸಬೇಕಾಗಿದೆ. ಹೀಗೆ ಮಾಡುವುದರಿಂದ ಮೂರು ದಿನಗಳಿಗೊಮ್ಮೆ ಸುಮಾರು ಏಳು ದಿನಗಳ ಕಾಲ ನಗರಕ್ಕೆ ನೀರು ಪೂರೈಕೆ ಮಾಡ ಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಜೆ ಅಣೆಕಟ್ಟಿನಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಪ್ರಸ್ತುತ ನೀರಿನ ಸಂಗ್ರಹವು 1.25.ಮೀಟರ್‌ಗಿಂತಲೂ ಕಡಿಮೆ ಇದೆ. 1.70 ಮೀಟರ್‌ಗಿಂತ ಕಡಿಮೆ ನೀರು ಇದ್ದರೆ ನೀರು ಪೂರೈಕೆ ಸಾಧ್ಯವಿಲ್ಲ. ಸದ್ಯ ಡ್ರೆಜ್ಜಿಂಗ್ ಮೂಲಕ ನೀರು ಹಾಯಿಸಿ ನೀರು ಸರಬರಾಜು ಮಾಡುವ ಪ್ರಯತ್ನ ನಡೆಯುತ್ತಿದ್ದರೂ ಸದ್ಯದಲ್ಲೇ ಮಳೆ ಬಾರದಿದ್ದರೆ ನೀರಿನ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪಕ್ಕೆ ತಿರುಗಲಿದೆ ಎಂಬುದು ಅಧಿಕಾರಿಗಳ ಆತಂಕವಾಗಿದೆ.
ಬಜೆಯಲ್ಲಿ ನೀರು ಖಾಲಿಯಾಗಿರುವುದರಿಂದ ಭಂಡಾರಿಬೆಟ್ಟು ಎಂಬಲ್ಲಿ ಇಂದು ಡ್ರೆಜ್ಜಿಂಗ್ ಕಾರ್ಯ ಆರಂಭಿಸಲಾಗಿದೆ. ನಾಳೆ ಕೂಡ ಕಾಮಗಾರಿ ಮುಂದುವರೆಯಲಿದ್ದು, ಮೇ 7ರಿಂದ ನಗರಕ್ಕೆ ನೀರು ಪೂರೈಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.
-ಆನಂದ್ ಕಲ್ಲೋಳಿಕಲ್, ಪೌರಾಯುಕ್ತರು, ನಗರಸಭೆ ಉಡುಪಿ