ಮಣಿಪಾಲ: ಬೆಡ್‌ನಲ್ಲಿ ಮಲಗಿಯೇ ನೀಟ್ ಪರೀಕ್ಷೆ ಬರೆದ ಅಪಘಾತದ ಗಾಯಾಳು ವಿದ್ಯಾರ್ಥಿನಿ
ಮಣಿಪಾಲ, ಮೇ 5: ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬಳು ಇಂದು ಮಣಿಪಾಲ ಆಸ್ಪತ್ರೆಯಿಂದ ನೇರವಾಗಿ ಅಂಬ್ಯು ಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಬೆಡ್‌ನಲ್ಲಿ ಮಲಗಿಯೇ ನೀಟ್ ಪರೀಕ್ಷೆ ಬರೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಸುರೇಶ್ ನಾಯ್ಕ ಎಂಬವರ ಮಗಳು ಸುಚೇತ ಎಸ್.(18) ಎಂಬಾಕೆ ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು, ಇದೇ ಅಪಘಾತದಲ್ಲಿ ಗಾಯಗೊಂಡ ಸುಚೇತ ಜೊತೆ ಇದ್ದ ಆಕೆಯ ಸ್ನೇಹಿತೆ ಪರ್ಕಳದ ಅನಘ (18) ಕೂಡ ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ.
ಇವರಿಬ್ಬರು ಕುಂದಾಪುರ ಎಕ್ಸಲೆಂಟ್ ದ್ವಿತೀಯ ಪಿಯು ವಿದ್ಯಾರ್ಥಿನಿಯರಾಗಿದ್ದು, ಮೇ 1ರಂದು ಇವರಿಬ್ಬರು ಪೇತ್ರಿಯಲ್ಲಿರುವ ಶಮಂತ್ ಶೆಟ್ಟಿ ಎಂಬವರ ಮನೆಯಿಂದ ಆತನ ತಾಯಿಯ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ಚೇರ್ಕಾಡಿ ಗ್ರಾಮದ ಮುಂಡ್ಕಿನ ಜೆಡ್ಡು ಎಂಬಲ್ಲಿ ಮರಕ್ಕೆ ಢಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪಘಾತದಿಂದ ಸುಚೇತಳಿಗೆ ಬಲಕಾಲಿನ ತೊಡೆ, ಮೊಣಗಂಟಿನ ಕೆಳಗೆ ತೀವ್ರ ಮೂಳೆ ಮುರಿತದ ಒಳ ಜಖಂ ಆಗಿದ್ದು, ಅನಘಳ ಹಣೆಗೆ ರಕ್ತ ಗಾಯ, ಎಡ ಮುಂಗಾಲಿನ ಕೆಳಗೆ, ಎಡ ಕೈಗೆ ತರಚಿದ ಗಾಯಗಳಾಗಿದ್ದವು. ಇವರಿಬ್ಬರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಣ್ಣಪುಟ್ಟ ಗಾಯಗೊಂಡಿದ್ದ ಅನಘ ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಆದರೆ ಕಾಲಿನ ಮೂಳೆ ಮುರಿತಕ್ಕೆ ಒಳಗಾದ ಸುಚೇತ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದಾರೆ. ಈ ಮಧ್ಯೆ ಸುಚೇತ ಹಾಗೂ ಅನಘ ನೀಟ್ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.
ಪರೀಕ್ಷೆಗಾಗಿ ಸುಚೇತ ಆಸ್ಪತ್ರೆಯಲ್ಲಿ ಮಲಗಿದ್ದಲ್ಲಿಯೇ ಓದಿ ಸಿದ್ಧತೆ ನಡೆಸಿದ್ದರು. ವೈದ್ಯರು ಹಾಗೂ ಆಸ್ಪತ್ರೆಯ ಅನುಮತಿ ಪಡೆದ ಸುಚೇತಾಳ ತಂದೆ ಆಕೆಯನ್ನು ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಯಿಂದ ನೇರವಾಗಿ ನೀಟ್ ಪರೀಕ್ಷೆ ನಡೆಯುವ ಕೇಂದ್ರಕ್ಕೆ ಕರೆದುಕೊಂಡು ಬಂದರು. ಅಲ್ಲಿ ಪ್ರಾಂಶುಪಾಲರ ಅನುಮತಿ ಪಡೆದು ಪ್ರತ್ಯೇಕ ಕೋಣೆಯಲ್ಲಿ ಸುಚೇತಾಳಿಗೆ ಬೆಡ್ ವ್ಯವಸ್ಥೆ ಕಲ್ಪಿಸಲಾಯಿತು.
ಚಿಕಿತ್ಸೆಯೊಂದಿಗೆ ಸುಚೇತಾ ಮಲಗಿದ್ದಲ್ಲಿಯೇ ಪರೀಕ್ಷೆ ಬರೆದರು. ಅದೇ ರೀತಿ ಅನಘ ಕೂಡ ಬ್ಯಾಂಡೇಜ್‌ನೊಂದಿಗೆ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ನಂತರ ಸಂಜೆ 5 ಗಂಟೆಗೆ ಸುಚೇತಳನ್ನು ಮತ್ತೆ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತು.
‘ಆಸ್ಪತ್ರೆ ಹಾಗೂ ಶಾಲೆಯವರ ಸಹಕಾರದಿಂದ ಪರೀಕ್ಷೆ ಬರೆದಿದ್ದೇನೆ. ಯಾವುದೇ ಸಮಸ್ಯೆ ಆಗಿಲ್ಲ. ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿದ್ದುದರಿಂದ ಪರೀಕ್ಷೆ ಬರೆಯಲು ಸುಲಭವಾಯಿತು’
-ಸುಚೇತಾ, ಗಾಯಾಳು ವಿದ್ಯಾರ್ಥಿನಿ
‘ಮಣಿಪಾಲ ಆಸ್ಪತ್ರೆಯವರ ಸಹಕಾರದಿಂದ ತೀವ್ರವಾಗಿ ಗಾಯಗೊಂಡು ಒಳರೋಗಿಯಾಗಿರುವ ನನ್ನ ಮಗಳು ಪರೀಕ್ಷೆ ಬರೆಯಲು ಸಾಧ್ಯವಾಯಿತು. ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿರುವುದರಿಂದ ಆಕೆ ಇನ್ನು ವಾರಕ್ಕೂ ಅಧಿಕ ಕಾಲ ಆಸ್ಪತ್ರೆಯಲ್ಲೇ ಉಳಿದು ಕೊಳ್ಳಬೇಕಾಗಿದೆ. ಅದರ ನಂತರವೂ ಆಕೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ’
-ಸುರೇಶ್ ನಾಯ್ಕ, ವಿದ್ಯಾರ್ಥಿನಿ ಸುಚೇತಾಳ ತಂದೆ