ರೊಜಾರಿಯೋ ಕೆಥೆಡ್ರಲ್‌ನಲ್ಲಿ 45ನೇ ಉಚಿತ ಸಾಮೂಹಿಕ ವಿವಾಹ

Update: 2019-05-05 16:16 GMT

ಮಂಗಳೂರು, ಮೇ 5: ರೊಜಾರಿಯೋ ಕೆಥೆಡ್ರಲ್‌ನ ಸಮಾಜ ಸೇವಾ ಘಟಕ ‘ಸಂತ ವಿನ್ಸೆಂಟ್ ಪಾವ್ಲ್’ (ಎಸ್‌ವಿಪಿ) ಸಭಾ ಆಶ್ರಯದಲ್ಲಿ 45ನೇ ಉಚಿತ ಸಾಮೂಹಿಕ ವಿವಾಹ ರವಿವಾರ ಜರುಗಿತು.

ವಿವಾಹ ಕಾರ್ಯಕ್ರಮಕ್ಕೆ ಮುನ್ನ ನೆರವೇರಿದ ಬಲಿಪೂಜೆಯ ನೇತೃತ್ವವನ್ನು ವಹಿಸಿದ ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಆರ್ಶೀವಚನ ನೀಡಿ ‘ಇಂದು ವಿವಾಹದ ಮೂಲಕ ವೈವಾಹಿಕ ಬದುಕಿಗೆ ಕಾಲಿಡುವ ದಂಪತಿಗಳಿಗೆ ಮಾತ್ರವಲ್ಲ ಮಂಗಳೂರು ಕ್ರೈಸ್ತ ಪವಿತ್ರ ಧರ್ಮಸಭೆಗೂ ವಿಶೇಷವಾದ ದಿನ. ವಿವಾಹದಂತಹ ಪವಿತ್ರ ಸಂಸ್ಕಾರದ ಮೂಲಕ ಒಟ್ಟಾಗುವ ದಂಪತಿಗಳು ದೇವರ ಕೃಪೆಗೆ ಪಾತ್ರರಾಗಿ ದ್ದಾರೆ. ಏಸು ಕ್ರಿಸ್ತ ನಿಮ್ಮ ಬದುಕಿಗೆ ದಾರಿ ದೀಪವಾಗಲಿ ಎಂದರು.

ನೂತನ ಸತಿ-ಪತಿಗಳು ಹೊಸ ಸಂಸ್ಕಾರವನ್ನು ಪಡೆದುಕೊಂಡು ದೇವರ ಪ್ರೀತಿಯ ಮಕ್ಕಳಂತೆ ಸಮಾಜದಲ್ಲಿ ಬಾಳಿ ಬದುಕಿ ಇತರರಿಗೆ ಸಾಕ್ಷಿ ಗಳಾಗಿ ಬೆಳೆಯಿರಿ. ದೇವರ ಮೇಲೆ ದೃಢ ನಂಬಿಕೆಯ ಜತೆಗೆ ಲೌಕಿಕ, ಆತ್ಮಿಕ ಬದುಕಿನಲ್ಲಿ ಏಸುವಿನ ಕೃಪೆ ಸದಾ ನಿಮ್ಮ ಜತೆಗಿರಲಿ ಎಂದು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ನುಡಿದರು.

ಬಲಿಪೂಜೆಯಲ್ಲಿ ರೊಜಾರಿಯೋ ಕೆಥೆಡ್ರಲ್‌ನ ರೆಕ್ಟರ್ ಫಾ.ಜೆ.ಬಿ.ಕ್ರಾಸ್ತಾ, ರೊಸಾರಿಯೋ ಪದವಿ ಕಾಲೇಜಿನ ಪ್ರಾಂಶುಪಾಲ ಫಾ.ರೊಕ್ಕಿ ಫೆರ್ನಾಂಡೀಸ್, ರೊಸಾರಿಯೋ ಚರ್ಚಿನ ಸಹಾಯಕ ಧರ್ಮಗುರು ಫಾ.ಪ್ಲಾವಿಯನ್ ರಾಜ್‌ಕಿರಣ್ ಲೋಬೊ, ಗ್ಲ್ಯಾಡ್‌ಸಮ್ ಹೋಮ್ ರೆಕ್ಟರ್ ಫಾ. ಅನಿಲ್ ಐವನ್ ಫೆರ್ನಾಂಡೀಸ್, ಸಂತ ಅಂತೋನಿ ಆಶ್ರಮದ ಫಾ. ಮುಕ್ತಿ ಪ್ರಕಾಶ್, ಬೊಂದೇಲ್ ಚರ್ಚಿನ ಧರ್ಮಗುರು ಫಾ. ಆ್ಯಂಡ್ರು ಲಿಯೋ, ಫಾ. ಮೈಕಲ್ ಹಾಗೂ ಫಾ. ಜಯಂತ್ ಭಾಗವಹಿಸಿದ್ದರು.

 ಮಂಗಳೂರು ಧರ್ಮಪ್ರಾಂತ ಮತ್ತು ಕರ್ನಾಟಕದ ನಾನಾ ಭಾಗಗಳ 13 ಜೋಡಿಗಳು ಸಾಮೂಹಿಕ ವಿವಾಹದ ಮೂಲಕ ಸತಿ-ಪತಿಗಳಾದರು. ಸಾಮೂಹಿಕ ವಿವಾಹದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅನಿವಾಸಿ ಉದ್ಯಮಿ ಐವನ್ ಎ. ಫೆರ್ನಾಂಡೀಸ್ ಭಾಗವಹಿಸಿದ್ದರು. ಕಳೆದ ನಾಲ್ಕೂವರೆ ದಶಕಗಳಿಂದ ನಡೆದ ಸಾಮೂಹಿಕ ವಿವಾಹದಲ್ಲಿ 980 ಜೋಡಿಗಳು ಸಾಂಸಾರಿಕ ಜೀವನಕ್ಕೆ ಕಾಲಿರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News