ಕೂಳೂರು : ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನೆ
ಕೂಳೂರು, ಮೇ 5: ನಾವು ಸದಾ ನಾನು-ನನ್ನದು ಎಂದು ತಿಳಿದುಕೊಳ್ಳದೆ ವಿಶಾಲ ಮನೋಭಾವದಿಂದ ಪ್ರಪಂಚವನ್ನು ಕಂಡರೆ ಸಮಾಜದ ಹಿತ ಕಾಪಾಡಲು ನಮ್ಮಿಂದಾದ ಸೇವೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲರೂ ವಿಶಾವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೂಳೂರು ಚರ್ಚ್‌ನ ಧರ್ಮಗುರು ರೆ.ಫಾ. ವಿನ್ಸೆಂಟ್ ಡಿಸೋಜ ಹೇಳಿದರು.
ಕೂಳೂರು ಪ್ರೌಢಶಾಲೆಯ ‘ಹಳೆ ವಿದ್ಯಾರ್ಥಿ ಸಂಘ 1996-97’ ಇದರ ವತಿಯಿಂದ ರವಿವಾರ ನಡೆದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯೆ ನೀಡಿದ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮಗಳು ವಿರಳವಾಗುತ್ತಿರುವ ಇಂದಿನ ದಿನಗಳಲ್ಲಿ ಚರ್ಚ್ ಶಾಲೆಯ ಹಳೆಯ ವಿದ್ಯಾರ್ಥಿಗಳು ವಿದ್ಯೆ ನೀಡುವ ಮೂಲಕ ಬದುಕು ರೂಪಿಸಿದ ಶಿಕ್ಷಕರನ್ನು ಮರೆಯದೆ ಸನ್ಮಾನಿಸಿರುವುದು ಅಪರೂಪದ ಮಾದರಿ ಕಾರ್ಯಕ್ರಮವಾಗಿದೆ ಎಂದು ರೆ.ಫಾ. ವಿನ್ಸೆಂಟ್ ಡಿಸೋಜ ಶ್ಲಾಘಿಸಿದರು.
ಶಿಕ್ಷಕರಾದ ಸೆಲಿನ್ ಡಿಸೋಜ, ಮೋಹಿನಿ, ರೆನಿಲ್ಡಾ ಪಿರೇರಾ, ಫಿಲೋಮಿನಾ ಡಿಕ್ರೋಝ್, ಉರ್ಬನ್ ಮಸ್ಕರೇನಸ್, ಸೌಮ್ಯಲತಾ,ಫಾ. ಪಾವ್ಲ್ ಸಿಕ್ವೇರ, ಸಿಸ್ಟರ್ ಲಿಲ್ಲಿ ಪಿಂಟೋ, ಗೋಪಾಲಕೃಷ್ಣ ತುಳುಪುಳೆ ಹಾಗೂ ನಾಲ್ವರು ಶಿಕ್ಷಕೇತರ ಸಿಬ್ಬಂದಿ ವರ್ಗವನ್ನು ಸನ್ಮಾನಿಸಲಾಯಿತು.
ಸಹಪಾಠಿ ವಿದ್ಯಾರ್ಥಿಗಳಾದ 7 ಮಂದಿ ಯೋಧರು ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಸಹಪಾಠಿ ಹಾಗೂ ಅಂಗನವಾಡಿ ಕಾರ್ಯಕರ್ತೆಯನ್ನು ಈ ಸಂದರ್ಭ ಗೌರವಿಸಲಾಯಿತು.
ಪ್ರೆಸಿಲ್ಲಾ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಶಾನವಾಝ್ ವಂದಿಸಿದರು.