ಬಡವರಿಗೆ ಸಹಾಯ ಮಾಡುವುದು ಉತ್ತಮ ಕಾರ್ಯ-ಅಬ್ದುಲ್ ರಹಿಮಾನ್ ಹಾಜಿ
ಪುತ್ತೂರು : ಬಡವರ ಪರವಾಗಿ ಚಿಂತನೆ ನಡೆಸುವುದು, ಅವರಿಗೆ ಸಹಾಯ ಮಾಡುವುದು ಒಳ್ಳೆಯ ಕಾರ್ಯವಾಗಿದೆ, ಒಳ್ಳೆಯ ಕೆಲಸವನ್ನು ಯಾರು ಮಾಡಿದರೂ ನಾವೆಲ್ಲರೂ ಅವರಿಗೆ ಬೆಂಬಲ ನೀಡಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಹೇಳಿದರು.
ಅವರು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಮೈದಾನಿಮೂಲೆ ತರ್ಬಿಯತುಲ್ ಹುದಾ ಅಸೋಸಿಯೇಶನ್ ವತಿಯಿಂದ ಮೈದಾನಿಮೂಲೆಯಲ್ಲಿ ನಡೆದ ರಂಝಾನ್ ಪ್ರಭಾಷಣ, ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಹಾಗೂ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ರಂಝಾನ್ ಕಿಟ್ ವಿತರಿಸಿ ಮಾತನಾಡಿದರು.
ರಂಝಾನ್ ಪೂರ್ವ ಸಿದ್ಧತೆಯ ಕುರಿತು ಮಾತನಾಡಿದ ಯಾಸೀನ್ ಹಸೈನಾರ್ ಸಅದಿ ಚರ್ಲಡ್ಕ ಅವರು, ರಂಝಾನ್ ತಿಂಗಳು ಮುಸ್ಲಿಂ ಸಮುದಾಯದ ಪಾಲಿಗೆ ಪುಣ್ಯದ ತಿಂಗಳಾಗಿದ್ದು, ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೆಡುಕನ್ನು ತ್ಯಜಿಸಿ, ಒಳಿತಿನ ಕಡೆಗೆ ಸಾಗಬೇಕು ಎಂದರು.
ಸ್ಥಳೀಯ ಖತೀಬ್ ಅಬ್ದುರ್ರಝಾಕ್ ಅಲ್ ಖಾಸಿಮಿ ಕೂರ್ನಡ್ಕ ಅವರು ಉದ್ಘಾಟಿಸಿದರು. ಮೈದಾನಿಮೂಲೆ ಮಸೀದಿಯ ಜೊತೆ ಕಾರ್ಯದರ್ಶಿ ಅಶ್ರಫ್ ಉಜಿರೋಡಿ, ಅಬ್ದುಲ್ ರಹಿಮಾನ್ ಶಾಂತಿಗೋಡು, ಆದಂ ಕುಂಞಿ ಎನ್.ಕೆ, ಎಸ್ಸೆಸ್ಸೆಫ್ ಮೈದಾನಿಮೂಲೆ ಶಾಖಾಧ್ಯಕ್ಷ ಜಮಾಲುದ್ದೀನ್ ಎನ್.ಕೆ, ಉಪಾಧ್ಯಕ್ಷ ಹಾರಿಸ್ ಅಡ್ಕ, ಅನ್ಸಾರ್ ಸಅದಿ ಬೆಳಂದೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಂಘಟನೆಯ ಅಧ್ಯಕ್ಷ ರಫೀಕ್ ಇಮ್ದಾದಿ ಸ್ವಾಗತಿಸಿ, ವಂದಿಸಿದರು.