ಮಾತೃ ಭಾಷೆಯ ಬಗ್ಗೆ ಕೀಳರಿಮೆ ಬೇಡ-ಡಾ. ಕಲ್ಲಡ್ಕ ಪ್ರಭಾಕರ ಭಟ್

Update: 2019-05-05 17:06 GMT

ಪುತ್ತೂರು: ಭಾಷೆಯೇ ಹಿಂದೂ ಧರ್ಮದ ಜೀವನ ಮೌಲ್ಯ. ಧರ್ಮ ಸಂಸ್ಕೃತಿ, ಜೀವನ ಮೌಲ್ಯಗಳು ಹಾಗೂ ಸಂಪ್ರದಾಯಗಳನ್ನು ಮಾತೃ ಭಾಷೆ ಉಳಿಸಿದೆ. ಈ ಬಗ್ಗೆ ನಮಗೆ ಹೆಮ್ಮೆಯಿರಬೇಕು. ನಮ್ಮ ಧರ್ಮ ಸಂಸ್ಕೃತಿ ಜೀವನ ಮೌಲ್ಯಗಳು ಉಳಿಸುವ ಭಾಗವಾಗಿರುವ ಮಾತೃ ಭಾಷೆಯ ಬಗ್ಗೆ ಕೀಳರಿಮೆ ಬೇಡ, ಸ್ವಾಭಿಮಾನವಿರಲಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಅವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಡೆಸ ಲಾದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಂಗ್ಲ ಭಾಷೆ, ಅಧ್ಯಯನಗಳು ಇಂದಿನ ವ್ಯವಹಾರದ ಒಂದು ಭಾಗ ಮಾತ್ರವಾಗಿದೆ. ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ಮಾತ್ರವೇ ಹೆಗ್ಗಳಿಕೆ ಯಲ್ಲ. ಮನೆಯಲ್ಲಿಯೂ ಆಂಗ್ಲ ಭಾಷೆಯನ್ನು ಬಳಕೆ ಮಾಡದೆ ಮಾತೃ ಭಾಷೆಯಲ್ಲಿಯೇ ಮಾತನಾಡಬೇಕು ಎಂದ ಅವರು ಮಾತೃ ಭಾಷೆ ನಮಗೆ ಬಹುದೊಡ್ಡ ಸಂಪತನ್ನು ನೀಡಿದೆ. ಮುಂದಿನ ದಿನಗಳಲ್ಲಿಯೂ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿಯೂ ಅವರ ಮಾತೃ ಭಾಷೆ ಹಿಂದಿಯನ್ನೇ ಬಳಕೆ ಮಾಡಿದ್ದಾರೆ. ಭಾರತದ ಆಹಾರ ಪದ್ದತಿಯನ್ನೇ ಮುಂದವರಿಸಿರುವ ಮೂಲಕ ಸ್ವಾಭಿಮಾನದ ಮೂಲಕ ಜಗತ್ತೇ ಅವರನ್ನು ಗೌರವಿಸಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಜಯಪ್ರಕಾಶ್ ಎಂ. ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯೇ ಪ್ರಧಾನ ವಾಗಿರಬೇಕು. ವಿದ್ಯಾರ್ಥಿಗಳು ತಪಸ್ಸಿನ ರೀತಿಯಲ್ಲಿ ಪರಿಶ್ರಮದ ಮೂಲಕ ಶಿಕ್ಷಣದಲ್ಲಿ ಯಶಸ್ಸುನ್ನು ಗಳಿಸಬೇಕು. ಶಾಲೆಯಲ್ಲಿ ಶಿಕ್ಷಕರು ನೀಡುವ ಶಿಕ್ಷಣವೇ ಅಂತಿಮವಲ್ಲ ಎಂಬುದನ್ನು ಪೋಷಕರು ತಿಳಿದುಕೊಳ್ಳಬೇಕು. ಶಿಕ್ಷಣದಲ್ಲಿ ಕೇವಲ ಅಂಕ ಗಳಿಕೆಯೇ ಮುಖ್ಯವಲ್ಲ. ಜ್ಞಾನಿ ಗಳಾಗಿ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.

ಶಾಲಾ ಸಂಚಾಲಕ ಮುರಳಿಧರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸುಂದರ ಗೌಡ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್, ನಿರ್ದೇಶಕ ಶಿವಪ್ರಸಾದ್ ಇ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ.ಶಶಿಧರ್ ಕಜೆ, ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯ ಬಿರ್ಮಣ್ಣ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸೆಸೆಲ್ಸಿ  ಪರೀಕ್ಷೆಯಲ್ಲಿ 624 ಅಂಕ ಗಳಿಸಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಸಿಂಚನಾ ಲಕ್ಷ್ಮಿ, 620 ಅಂಕ ಪಡೆದ ಅವನೀಶ್ ಹಾಗೂ 619 ಅಂಕ ಪಡೆದ ಶಶಾಂಕ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಗಳನ್ನು ಅಭಿನಂದಿಸಲಾಯಿತು.

ಶಾಲಾ ಮುಖ್ಯಗುರು ಸತೀಶ್ ಕುಮಾರ್ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯೆ ವೀಣಾಜೋಷಿ ವಂದಿಸಿದರು. ಶಾಂತಿ ಹಾಗೂ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News