ಕನ್ನಡ ಸಾಹಿತ್ಯ ಪರಿಷತ್ತು 105ನೇ ವರ್ಧಂತಿ: ಮಮ್ತಾಝ್ ಬೇಗಂರ "ಸ್ವಾತಂತ್ರ್ಯದ ಕಹಳೆ" ಕಾದಂಬರಿ ಬಿಡುಗಡೆ
ಕಾಪು: ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು, ನುಡಿ, ಸಂಸ್ಕೃತಿ ಜನಪದದ ರಕ್ಷಕನಾಗಿ ಕೇಂದ್ರ ಮಟ್ಟದಿಂದ ಗ್ರಾಮೀಣ ಪ್ರದೇಶದ ವರೆಗೂ ವಿಸ್ತಾರಗೊಂಡು ಕನ್ನಡದ ಕಾರ್ಯವನ್ನು ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನುಡಿದರು.
ಅವರು ರವಿವಾರ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಷತ್ತು 105ನೇ ಸಂಸ್ಥಾಪನಾ ದಿನಾಚರಣೆ ಸಮಾರಭವನ್ನು ಉದ್ಘಾಟಿಸಿ ಮಾತನಾಡಿದರು.
"ಸ್ವಾತಂತ್ರ್ಯದ ಕಹಳೆ" ಕಾದಂಬರಿ ಬಿಡುಗಡೆ: ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಮಮ್ತಾಜ್ ಬೇಗಂರವರು ಬರೆದ ಸ್ವಾತಂತ್ರ್ಯಕ್ಕಾಗಿ ಪೋರ್ಚುಗೀಸರೊಂಡನೆ ಹೋರಾಟ ನಡೆಸಿದ ಉಳ್ಳಾಲದ ರಾಣಿ ಅಬ್ಬಕ್ಕರವರ ಜೀವನಾಧಾರಿತ "ಸ್ವಾತಂತ್ರ್ಯದ ಕಹಳೆ" ಕಾದಂಬರಿಯನ್ನು ಮಂಗಳೂರು ಶ್ರೀಗಣಪತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಬಿಡುಗಡೆ ಗೊಳಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ಕೋಮುಸಾಮರಸ್ಯವನ್ನು ನಾಶ ಪಡಿಸಿದ ಪೋರ್ಚುಗೀಸರ ದಬ್ಬಾಳಿಕೆ ಆಕ್ರಮಣಕಾರಿ ನೀತಿಯನ್ನು ದಿಟ್ಟವಾಗಿ ಎದುರಿಸಿದ್ದರು. ಮುಸ್ಲಿಂ ಸಮುದಾಯದ ಪ್ರಪ್ರಥಮ ಕವಯತ್ರಿ, ಸಾಹಿತಿ, ಪತ್ರಕರ್ತೆ ಯಾಗಿಯೂ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾ, ಸಾಹಿತ್ಯಕ್ಷೇತ್ರಕ್ಕೆ ನೀಡಿದ ಕೊಡುಗೆ ಅದ್ಭುತವಾದುದು. ಇವರ ಈ ಕಾದಂಬರಿ ವಿವಿಧ ಭಾಷೆಗಳಿಗೆ ಅನುವಾದ ಆಗಬೇಕು ಎಂದರು.
ಸಾಹಿತಿ ಮಮ್ತಾಝ್ ಮಾತನಾಡಿ ಕಳೆದ ನಾಲ್ಕು ವರ್ಷಗಳ ಶ್ರಮದ ಫಲವಾಗಿ ಈ ಕಾದಂಬರಿ ಮೂಡಿ ಬಂದಿದೆ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಕಾದಂಬರಿಯ ಬಗ್ಗೆ ವಿಮರ್ಶಿಸಿದರು.
ಸಮಾರಂಭದ ಅಧ್ಯಕ್ಷತೆನ್ನು ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲ್ಲೂಕು ಗೌರವ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಅಮ್ಮಣ್ಣಾಯ ನಿರೂಪಿಸಿದರು. ಸಮಿತಿ ಸದಸ್ಯ ಹರೀಶ್‍ಚಂದ್ರ ಕಟಪಾಡಿ ವಂದಿಸಿದರು.