ದ.ಕ.: ನಾಲ್ಕು ಕೇಂದ್ರಗಳಲ್ಲಿ ‘ನೀಟ್’ ಪರೀಕ್ಷೆ

Update: 2019-05-05 17:11 GMT

 ಮಂಗಳೂರು, ಮೇ 5: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ 2019ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ರವಿವಾರ ಸುಗಮವಾಗಿ ನಡೆಯಿತು.

ನಗರದ ಸೈಂಟ್ ಅಲೋಶಿಯಸ್, ಶಾರದಾ ವಿದ್ಯಾಲಯ, ಕೆನರಾ ಪ್ರೌಢಶಾಲೆ, ಬಜಪೆ ಶ್ರೀದೇವಿ ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಅಪರಾಹ್ನ 2 ಗಂಟೆಯಿಂದ 5ರವರೆಗೆ ಪರೀಕ್ಷೆ ಯಾವುದೇ ಅಡ್ಡಿ,ಆತಂಕ, ಗೊಂದಲಗಳಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಮಧ್ಯಾಹ್ನ 12ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಹಾಜರಿರುವುದು ಕಡ್ಡಾಯವಾದುದರಿಂದ ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಕಂಡು ಬಂತು. ಅಪರಾಹ್ನ 1.30ಕ್ಕೆ ಪರೀಕ್ಷಾ ಕೊಠಡಿಯ ಪ್ರವೇಶ ದ್ವಾರವನ್ನು ಮುಚ್ಚಲಾಯಿತು.

ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮವಿದ್ದುದರಿಂದ ಅಭ್ಯರ್ಥಿಗಳು ತುಂಬು ತೋಳಿನ ಅಂಗಿ, ಶೂ ಧರಿಸುವುದಕ್ಕೆ ನಿಷೇಧವಿತ್ತು. ವಿದ್ಯಾರ್ಥಿನಿಯರಿಗೂ ರಿಂಗ್, ಮೂಗುತಿ, ಚೈನ್, ಪದಕ ಸಹಿತ ಯಾವುದೇ ಆಭರಣ ತೊಡುವಂತಿರಲಿಲ್ಲ. ಈ ಬಗ್ಗೆ ಕಾಲೇಜಿನಲ್ಲೇ ಮುನ್ಸೂಚನೆ ನೀಡಿದ್ದರಿಂದ ವಿದ್ಯಾರ್ಥಿಗಳು ಅದನ್ನು ಪಾಲಿಸದ ಕಾರಣ ಗೊಂದಲಕ್ಕೆ ಅವಕಾಶವೇ ಇರಲಿಲ್ಲ.

ನಗರದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಮಕ್ಕಳನ್ನು ಕರೆದೊಯ್ಯಲು ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳಲ್ಲಿ ಹೆತ್ತವರು ಆಗಮಿಸಿದ್ದರು. ಕಾರುಗಳನ್ನು ಕಿರಿದಾದ ರಸ್ತೆಗಳಲ್ಲಿಯೇ ಪಾರ್ಕಿಂಗ್ ಮಾಡಿದ್ದರಿಂದ ಸಂಜೆ 5ರ ವೇಳೆ ಇತರ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News