ಬೈಸಿಕಲ್ ಕ್ಲಬ್(ಎಂಬಿಸಿ)ನ ವಾರ್ಷಿಕ ದಿನಾಚರಣೆ

Update: 2019-05-05 17:12 GMT

ಮಂಗಳೂರು, ಮೇ 5: ಮಂಗಳೂರು ಬೈಸಿಕಲ್ ಕ್ಲಬ್(ಎಂಬಿಸಿ)ನ ವಾರ್ಷಿಕ ದಿನಾಚರಣೆಯು ರವಿವಾರ ನಗರದ ಸಹೋದಯ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ನಗರದಲ್ಲಿ ಸೈಕ್ಲಿಸ್ಟ್‌ಗಳು ಹಾಗೂ ಪಾದಚಾರಿಗಳ ಸುರಕ್ಷತೆಯು ಅತಿ ಸವಾಲಿನದ್ದು, ಈ ಬಗ್ಗೆ ಮಂಗಳೂರು ಬೈಸಿಕಲ್ ಕ್ಲಬ್‌ನಂತಹ ಸಂಘಟನೆಗಳು ಗಮನ ಹರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕೊಲೆಗಾರರಿಗೆ ಒಂದು ಉದ್ದೇಶವಿರುತ್ತದೆ. ಆದರೆ ಹೆದ್ದಾರಿ, ನಗರ ರಸ್ತೆಗಳಲ್ಲಿ ಅತಿ ವೇಗ ಹಾಗೂ ಅಪಾಯಕಾರಿಯಾಗಿ ಸಂಚರಿಸುವ ವಾಹನಗಳ ಚಾಲಕರು ಯಾವುದೇ ಕಾರಣವಿಲ್ಲದೆ ಸೈಕಲ್ ಸವಾರರು, ಪಾದಚಾರಿಗಳ ಬಲಿ ಪಡೆಯುವುದು ಸಾಮಾನ್ಯ ಎಂಬಂತಾಗಿದೆ. ಹಾಗಾಗಿ ಸುರಕ್ಷಿತ ವಾಹನ ಚಾಲನೆ ಕುರಿತು ನಗರದಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕಾಗಿದೆ ಎಂದು ಅರುಣ್ ಚಕ್ರವರ್ತಿ ನುಡಿದರು.

ತಮ್ಮ ಸೈಕ್ಲಿಂಗ್ ಆಸಕ್ತಿಯ ಬಗ್ಗೆ ಅನುಭವಗಳನ್ನು ಹಂಚಿಕೊಂಡ ಅರುಣ್ ಚಕ್ರವರ್ತಿ, ಸೈಕ್ಲಿಂಗ್‌ನಂತಹ ವೈಯುಕ್ತಿಕ ಕ್ರೀಡಾ ಚಟುವಟಿಕೆಗಳನ್ನು ಮಕ್ಕಳು ಆಯ್ದುಕೊಂಡರೆ ಅವರ ಬದುಕು ಆರೋಗ್ಯ ಪೂರ್ಣವಾಗುತ್ತದೆ, ನಗರದಲ್ಲಿ ಕೇವಲ ಹವ್ಯಾಸಕ್ಕಷ್ಟೇ ಸೈಕ್ಲಿಂಗ್ ಮಾಡುವ ಬದಲು ಇಂಧನ ಉಳಿತಾಯ ಹಾಗೂ ಮಾಲಿನ್ಯ ನಿಯಂತ್ರಣಕ್ಕಾಗಿಯೂ ಸೈಕಲ್‌ಗಳು ಬಳಕೆಯಾದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

ಸೈಕಲ್ ಹಸ್ತಾಂತರ: ಈ ವೇಳೆ ಮಂಗಳೂರಿನ ದಶಕದ ಹಿಂದಿನ ಹಿರಿಯ ಸೈಕಲ್ ರೇಸಿಂಗ್ ಪಟು, ನಾಬರ್ಟ್ ಡಿಸೋಜ ಅವರ ಟ್ರೆಕ್ 1.5 ರೋಡ್ ಬೈಸಿಕಲ್‌ನ್ನು ಬಾಗಲಕೋಟ ಜಿಲ್ಲೆ ಜಮಖಂಡಿಯ ಉದಯೋನ್ಮುಖ ಸೈಕ್ಲಿಂಗ್ ಪಟು 15ರ ಹರೆಯದ ಉದಯ ಗುಳೇದ್‌ಗೆ ದಾನವಾಗಿ ಹಸ್ತಾಂತರಿಸಿದರು.

ನಾಬರ್ಟ್ ಡಿಸೋಜ ತಮ್ಮಲ್ಲಿರುವ ಇನ್ನೊಂದು ಕಾರ್ಬನ್ ರೋಡ್ ಬೈಕ್ ಟ್ರೆಕ್ ಮಡೋನ್‌ನ್ನು ಮುಂದಿನ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್ ವಿಜೇತರಿಗೆ ನೀಡುವುದಾಗಿ ತಿಳಿಸಿದರು.

ಎಂಬಿಸಿಯಿಂದ ಗೋವಾದ ಅಲ್ಟ್ರಾ ಸ್ಪೈಸ್ ರೇಸ್‌ನಲ್ಲಿ ಭಾಗವಹಿಸಿ ಮೊದಲ ಸ್ಥಾನಿಗಳಾಗಿದ್ದ ಹರಿಪ್ರಸಾದ್, ಶ್ರಿಕಾಂತರಾಜ್, ಮಸೂದ್ ಟೀಕೆ ಅನುಭವಗಳನ್ನು ಹಂಚಿಕೊಂಡರು. ಎಂಬಿಸಿ ಸದಸ್ಯರಾದುದರ ಅನುಭವಗಳನ್ನು ಡಾ.ಸುನೀತಾ ಮೆಂಡಿಸ್, ಮಧುರಾ ಜೈನ್ ಹಾಗೂ ಗುರುರಾಜ್ ಪಾಟೀಲ್ ಪ್ರಸ್ತುತಪಡಿಸಿದರು. ಕ್ಲಬ್‌ನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದ ಎಂಬಿಸಿ ಅಧ್ಯಕ್ಷ ದಿಜರಾಜ್ ನಾಯರ್ ಕೇವಲ ನಾಲ್ಕು ಸದಸ್ಯರಿಂದ 2011ರಲ್ಲಿ ಆರಂಭಗೊಂಡ ಕ್ಲಬ್ ಇದೀಗ 100ಕ್ಕೂ ಹೆಚ್ಚು ನೋಂದಾಯಿತ ಸದಸ್ಯರನ್ನು ಒಳಗೊಂಡಿದೆ ಎಂದರು. ಕ್ಲಬ್ ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಮಧುಕರ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಜಹೀರ್ ಮನ್ನಿಪ್ಪಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News