ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಕಾರ್ಮಿಕ ಮೃತ್ಯು

Update: 2019-05-05 17:53 GMT
ವಕೀಲ್ ಕುಮಾರ್

ಮಂಗಳೂರು, ಮೇ 5: ಎಂಆರ್‌ಪಿಎಲ್‌ನ ಮೂರನೇ ಹಂತದ ಪ್ಲಾಂಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಯ ವೇಳೆ ಆಕಸ್ಮಿಕವಾಗಿ ಪೈಪ್ ತಲೆ ಮೇಲೆ ಬಿದ್ದ ಪರಿಣಾಮ ಗುತ್ತಿಗೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಉತ್ತರ ಪ್ರದೇಶದ ಕುಶಿನಗರ ಮೂಲದ ಹಾಗೂ ಸದ್ಯ ಜೋಕಟ್ಟೆಯಲ್ಲಿ ವಾಸವಾಗಿದ್ದ ವಕೀಲ್ ಕುಮಾರ್ (37) ಮೃತ ಕಾರ್ಮಿಕ.

ಘಟನೆ ವಿವರ: ಕುತ್ತೆತ್ತೂರಿನಲ್ಲಿರುವ ಎಂಆರ್‌ಪಿಎಲ್‌ನ ಮೂರನೇ ಹಂತದ ಪ್ಲಾಂಟ್‌ನಲ್ಲಿ ‘ಆಕಾಶ್ ಇಂಜಿನಿಯರಿಂಗ್’ ಎಂಬ ಗುತ್ತಿಗೆ ಕಂಪೆನಿ ಕೆಲಸ ನಿರ್ವಹಿಸುತ್ತಿದೆ. ಇಲ್ಲಿ ವಕೀಲ್‌ ಕುಮಾರ್ ಕಾರ್ಮಿಕನಾಗಿ ದುಡಿಯುತ್ತಿದ್ದರು. ಶನಿವಾರ ಪಿಪಿಪಿಎಫ್‌ಸಿಸಿ ಯುನಿಟ್‌ನಲ್ಲಿ ವಕೀಲ್‌ ಕುಮಾರ್ ಕೆಲಸದಲ್ಲಿ ನಿರತನಾಗಿದ್ದು, ಈತನ ಜೊತೆ ಇನ್ನು ಐವರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 12:30ರ ಸುಮಾರಿಗೆ ವಕೀಲ್ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಭಾರೀ ಕೊಳವೆಯೊಂದು ತುಂಡಾಗಿ ವಕೀಲ್ ತಲೆಯ ಮೇಲೆ ಬಿದ್ದಿತ್ತೆನ್ನಲಾಗಿದೆ. ಇದರಿಂದ ವಕೀಲ್‌ರ ತಲೆಗೆ ಗಂಭೀರ ಗಾಯಗಳಾಗಿದ್ದರೆ, ಎದೆ ಮತ್ತು ಕೈಗೂ ಗಾಯಗಳಾಗಿದ್ದವು. ಬಳಿಕ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ವಕೀಲ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದರು ಎಂದು ಮೃತ ಕಾರ್ಮಿಕನ ಸಹೋದ್ಯೋಗಿಗಳಾದ ಸೂರಜ್‌ ಕುಮಾರ್ ಹಾಗೂ ಯಶವಂತ್ ಎಂಬವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಸುರತ್ಕಲ್‌ನ ಕಾನದ ಖಾಸಗಿ ಶವಾಗಾರದಲ್ಲಿರಿಸಲಾಗಿದೆ. ಸೋಮವಾರ (ಮಾ.6) ನಸುಕಿನ ಜಾವ 4 ಗಂಟೆಗೆ ಪ್ರಥಮ ವಿಮಾನದಲ್ಲಿ ಬೆಂಗಳೂರು ಮೂಲಕ ಮೃತದೇಹವನ್ನು ಉತ್ತರ ಪ್ರದೇಶದ ಕುಶಿ ನಗರದಲ್ಲಿರುವ ವಕೀಲ್ ಮನೆಗೆ ಕೊಂಡೊಯ್ಯ ಲಾಗುತ್ತದೆ ಎಂದು ಯಶವಂತ್ ಹೇಳಿದ್ದಾರೆ.

ಮನೆಗೆ ಆಧಾರಸ್ತಂಭವಾಗಿದ್ದ: ಮೃತ ವಕೀಲ್‌ ಕುಮಾರ್‌ಗೆ ತಂದೆ, ತಾಯಿ, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಕುಟುಂಬದವರೆಲ್ಲ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ವಕೀಲ್ ಕುಟುಂಬ ನಿರ್ವಹಣೆಗಾಗಿ ಮಂಗಳೂರಿಗೆ ಕಳೆದ ತಿಂಗಳು ಆಗಮಿಸಿ ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ದುಡಿಯುತ್ತಿದ್ದರು. ಕುಟುಂಬಕ್ಕೆ ಈತನೇ ಆಧಾರ ಸ್ಥಂಭವಾಗಿದ್ದರು ಎಂದು ಯಶವಂತ್ ಹೇಳಿದ್ದಾರೆ.

‘ಆಕಾಶ್ ಇಂಜಿನಿಯರಿಂಗ್’ ಗುತ್ತಿಗೆ ಕಂಪೆನಿಯೊಂದಿಗೆ ಮಾತುಕತೆ ನಡೆಸಿದ್ದು, ಪರಿಹಾರ ಧನ ನೀಡುವ ಭರವಸೆಯನ್ನೇನೋ ನೀಡಿದ್ದಾರೆ. ಅದಕ್ಕೂ ಮೊದಲು ಮೃತನ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ವಿಧಿ ವಿಧಾನಗಳನ್ನು ಪೂರೈಸಿ. ಆ ಬಳಿಕ ಮೃತನ ಪತ್ನಿಗೆ ಪರಿಹಾರ ಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ಬಗ್ಗೆ ಕಂಪೆನಿ ಲಿಖಿತವಾಗಿ ಯಾವುದೇ ಭರವಸೆ ನೀಡಿಲ್ಲ ಎಂದು ಯಶವಂತ್ ತಿಳಿಸಿದ್ದಾರೆ.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ಇನ್‌ಸ್ಪೆಕ್ಟರ್‌ರ ದ್ವಂದ್ವ ಹೇಳಿಕೆ !

ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ದುಡಿಯುತ್ತಿದ್ದ ವಕೀಲ್‌ ಕುಮಾರ್ ಎಂಬಾತ ಕೆಲಸದ ವೇಳೆ ಪೈಪ್‌ವೊಂದು ಮೈಮೇಲೆ ಬಿದ್ದ ಪರಿಣಾಮ ಮೃತಪಟ್ಟಿದ್ದಾನೆ. ಆತನ ಮೃತದೇಹವನ್ನು ಈಗಾಗಲೇ ವಿಮಾನದ ಮೂಲಕ ಉತ್ತರ ಪ್ರದೇಶಕ್ಕೆ ಒಯ್ಯಲಾಗಿದೆ ಎಂದು ಅವಘಡದ ಕುರಿತಂತೆ ಸುರತ್ಕಲ್ ಇನ್‌ಸ್ಪೆಕ್ಟರ್ ರಾಮಕೃಷ್ಣ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದರು. ಆದರೆ ಘಟನೆ ಕುರಿತಂತೆ ಪತ್ರಿಕೆ ಮಾಹಿತಿ ಕಲೆ ಹಾಕಿದಾಗ ವಕೀಲ್ ಕುಮಾರ್ ಮೃತದೇಹ ಸುರತ್ಕಲ್‌ನಲ್ಲೇ ಇರುವುದು ತಿಳಿದುಬಂತು.

ವಕೀಲ್ ಮೃತದೇಹವನ್ನು ಸುರತ್ಕಲ್ ಕಾನ ಗ್ರಾಮದ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತದೇಹವನ್ನು ಸೋಮವಾರ ಮುಂಜಾನೆಯ ವಿಮಾನದಲ್ಲಿ ಉತ್ತರ ಪ್ರದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ಮೃತರ ಸಂಬಂಧಿಕರು ಪತ್ರಿಕೆಗೆ ತಿಳಿಸಿದ್ದಾರೆ. ಆದರೆ ಸುರತ್ಕಲ್ ಇನ್‌ಸ್ಪೆಕ್ಟರ್ ಮಾತ್ರ ಮೃತದೇಹವನ್ನು ರವಿವಾರವೇ ಕೊಂಡೊಯ್ಯಲಾಗಿದೆ ಎಂದು ಹೇಳಿದ್ದರು.

ಕಾರ್ಮಿಕನ ಸಾವಿನ ಸಮಗ್ರ ತನಿಖೆಯಾಗಲಿ: ಡಿವೈಎಫ್‌ಐ

ಎಂಆರ್‌ಪಿಎಲ್ ಪ್ಲಾಂಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ವಕೀಲ್ ಕುಮಾರ್ ಸಾವಿಗೆ ಸಂಬಂಧಿಸಿ ಕಂಪೆನಿ ಹೊಣೆಗಾರಿಕೆಯಿಂದ ತಪ್ಪಿಸಿ ಕೊಳ್ಳುವಂತಿಲ್ಲ. ಈ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ವಕೀಲ್ ಕುಮಾರ್ ಕಾಮಗಾರಿಯ ಗುತ್ತಿಗೆ ವಹಿಸಿರುವ ಕಂಪೆನಿಯ ಕಾರ್ಮಿಕರಾಗಿದ್ದರೂ ಆತ ಎಂಆರ್‌ಪಿಎಲ್ ಸಂಸ್ಥೆಯ ಆವರಣದಲ್ಲಿ ಸಂಸ್ಥೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದ ವೇಳೆ ಸಾವಿಗೀಡಾಗಿರುವುದರಿಂದ ಎಂಆರ್‌ಪಿಎಲ್‌ನ ಕಾರ್ಮಿಕರು ಮೃತಪಟ್ಟಾಗ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.

ಕಾರ್ಮಿಕರ ಸುರಕ್ಷತೆಯ ಬಗ್ಗೆ ಗುತ್ತಿಗೆ ಕಂಪೆನಿ ನಿರ್ಲಕ್ಷ ವಹಿಸಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಂಡಿದ್ದೇವೆ: ಎಂಆರ್‌ಪಿಎಲ್ 

ಎಂಆರ್‌ಪಿಎಲ್‌ನ ಪ್ಲಾಂಟ್‌ನಲ್ಲಿ ಕಾರ್ಯನಿರ್ವಹಿಸುವ ವೇಳೆ ಗುತ್ತಿಗೆ ಕಾರ್ಮಿಕನೋರ್ವ ಮೈಮೇಲೆ ಪೈಪೊಂದು ಮುರಿದು ಬಿದ್ದು ಪರಿಣಾಮ ಸಾವನ್ನಪ್ಪಿ ದ್ದಾರೆ. ನಮ್ಮ ಕಂಪೆನಿಯಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಸಂಸ್ಥೆಯ ಆವರಣದಲ್ಲಿ ಕಾರ್ಯ ನಿರ್ವಹಿಸುವ ಗುತ್ತಿಗೆ ಕಾರ್ಮಿಕರೂ ಈ ಕ್ರಮಗಳನ್ನು ಅಳವಡಿಸಿಕೊಳ್ಳಲು ಎಲ್ಲ ಗುತ್ತಿಗೆ ಸಂಸ್ಥೆಗಳಿಗೂ ಸೂಚಿಸಲಾ ಗುತ್ತದೆ ಎಂದು ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗಾ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಗುತ್ತಿಗೆ ಕಾರ್ಮಿಕರಾಗಿ ಬರುವ ಎಲ್ಲಾ ಕಾರ್ಮಿಕರನ್ನು ಅಪಘಾತ ವಿಮಾ ಸೌಲಭ್ಯಕ್ಕೆ ಒಳಪಡಿಸಲಾಗಿರುತ್ತದೆ. ಈ ರೀತಿ ವಿಮಾ ಸೌಲಭ್ಯ ಹೊಂದಿರುವ ಕಾರ್ಮಿಕರು ಮಾತ್ರ ಇಲ್ಲಿ ಗುತ್ತಿಗೆ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಶನಿವಾರ ಗುತ್ತಿಗೆ ಕಾರ್ಮಿಕ ವಕೀಲ್ ಕುಮಾರ್ ಎಂಬವರು ಮೃತಪಟ್ಟಿದ್ದು, ವಿಮಾ ಸಂಸ್ಥೆಯ ಮೂಲಕ ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ನಿನ್ನೆ ನಡೆದ ಘಟನೆಯ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು.

ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರ: ಗುತ್ತಿಗೆ ಕಂಪೆನಿ

ವಕೀಲ್‌ ಕುಮಾರ್ ಕುಟುಂಬಕ್ಕೆ 10 ಲಕ್ಷ ರೂ. ಇನ್ಶೂರೆನ್ಸ್ ಪರಿಹಾರ ನೀಡಲಾಗುವುದು ಎಂದು ಅವರು ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆ ಕಂಪೆನಿ ‘ಆಕಾಶ್ ಇಂಜಿನಿಯರಿಂಗ್’ನ ಮಾಲಕ ರಾಜೇಶ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಮೃತ ಕಾರ್ಮಿಕನ ಆಸ್ಪತ್ರೆಯ ಹಾಗೂ ಮೃತದೇಹವನ್ನು ಉತ್ತರಪ್ರದೇಶಕ್ಕೆ ಒಯ್ಯಲು ಅಗತ್ಯ ಎಲ್ಲ ಹಣಕಾಸು ವೆಚ್ಚಗಳನ್ನು ‘ಆಕಾಶ್ ಇಂಜಿನಿಯರಿಂಗ್’ ಕಂಪೆನಿಯೇ ಭರಿಸಿದೆ. ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು 10-15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ. ಬಳಿಕ ಮೃತನ ಪತ್ನಿಗೆ ಪರಿಹಾರ ಹಣವಾಗಿ 10 ಲಕ್ಷ ರೂ. ನೀಡಲಾಗುವುದು ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News