ಬೇಸಿಗೆ ಶಿಬಿರಗಳ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ
ಉಡುಪಿ, ಮೇ 6: ಬೇಸಿಗೆ ಶಿಬಿರಗಳ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ ಸಾಧ್ಯವಿದ್ದು, ಮಕ್ಕಳು ಓದುವುದರ ಜೊತೆಗೆ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಮಹಾವೀರ ಆಜ್ರಿ ಹೇಳಿದ್ದಾರೆ.
ಸೋಮವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಬಾಲ ಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನೆ ಉಡುಪಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ಆರೋಗ್ಯ, ಸಾಮಾಜಿಕ ಹಾಗೂ ಮಾನಸಿಕ ಬೆಳವಣಿಗೆಗೆ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದು ಉತ್ತಮ ಭವಿಷ್ಯ ಹೊಂದುವಂತಾಗಲಿ ಎಂದು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ್ ಪಿ. ಮಾತನಾಡಿ, ಎಲ್ಲಾ ಮಕ್ಕಳಲ್ಲಿಯೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಮುಕ್ತವಾದ ವೇದಿಕೆಗಳು ಸಿಕ್ಕಾಗ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳು ಹೊರ ಬರಲು ಸಾಧ್ಯವಾಗುತ್ತದೆ. ಪೋಷಕರು ವಿದ್ಯಾರ್ಥಿಗಳಿಗೆ ಒತ್ತಡವನ್ನು ಹೇರದೆ ಅಗತ್ಯವಿರುವ ಕಲಿಕೆಗೆ ಸ್ವಾತಂತ್ರ ನೀಡಬೇಕು ಎಂದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಶಂಕರ್‌ದಾಸ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೋಹಿತ್ ಉಪಸ್ಥಿತರಿದ್ದರು.
12 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಯೋಗಾಭ್ಯಾಸ, ಚಿತ್ರಕಲೆ, ಸಂಗೀತ ರಸಸ್ವಾದನ ತರಬೇತಿ, ಬಟ್ಟೆ ಹಾಗೂ ಪೇಪರ್‌ಗಳಿಂದ ಕರಕುಶಲ ತರಬೇತಿ, ಕ್ಷೇತ್ರ ವೀಕ್ಷಣೆ ನಡೆಯಲಿದ್ದು, ಕೊನೆಯ ದಿನ ಪ್ರತಿಭಾ ಪ್ರದರ್ಶನ ನಡೆಯಲಿದೆ.
ಬಾಲಕೃಷ್ಣಯ್ಯ ಸ್ವಾಗತಿಸಿದರು, ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸಂಗೀತ ವಂದಿಸಿದರು.