ಕುಡಿಯುವ ನೀರು ಪೂರೈಕೆಗೆ ಚುನಾವಣಾ ನೀತಿ ಸಂಹಿತೆ ತೊಡಕಾಗುವುದಿಲ್ಲ: ಐವನ್ ಡಿಸೋಜ
ಮಂಗಳೂರು, ಮೇ 6: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಸಮಸ್ಯೆ ಪರಿಹರಿಸಲು ಚುನಾವಣಾ ನೀತಿ ಸಂಹಿತಿ ಅಡ್ಡಿಯಾಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ತುರ್ತು ನೀರು ಪೂರೈಕೆಗೆ ಜಿಲ್ಲಾಡಳಿತಕ್ಕೆ ಸರ ಕಾರದಿಂದ 6 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ತುಂಬೆಯ ಕಿಂಡಿ ಅಣೆಕಟ್ಟಿನಲ್ಲಿ 4.38 ಮೀಟರ್ ನೀರು ಸಂಗ್ರಹ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ತುಂಬೆಯಲ್ಲಿ 5.6 ಮೀಟರ್ ನೀರು ಸಂಗ್ರಹ ಇತ್ತು. ಐದನೆ ಹಂತದ ಚುನಾವಣೆ ಸಂದರ್ಭದಲ್ಲಿ ನೀರಿನ ಕೊರತೆ ತೀವ್ರಗೊಳ್ಳುತ್ತಿದೆ ಈ ಹಂತದಲ್ಲಿ ಟ್ಯಾಂಕರ್ ಸಹಿತ ಇತರ ವ್ಯವಸ್ಥೆಯ ಮೂಲಕ ನೀರು ಪೂರೈಕೆಗೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ಐವನ್ ಡಿಸೋಜನ ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಪ್ರಾಕೃತಿ ವಿಕೋಪ ಎದುರಿಸಲು ವಿಮಾನ ನಿಲ್ದಾಣದ ಪ್ರದೇಶದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವ ಮೂಲಕ ಮಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
ಪ್ರಧಾನಿ ಮೋದಿಯಿಂದ ಕೀಳು ಮಟ್ಟದ ಭಾಷೆ :- ಪ್ರಧಾನಿ ಮೋದಿ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿಯ ವಿರುದ್ಧ ಕೀಳು ಮಟ್ಟದ ಭಾಷಾ ಪ್ರಯೋಗ ನಡೆಸಿದ್ದಾರೆ. ಬೋಪೋರ್ಸ್ ಹಗರಣದಿಂದ ನ್ಯಾಯಾಲಯದ ಮೂಲಕ ದೋಷ ಮುಕ್ತರಾದ ಮತ್ತು ದಿವಂಗತರಾದ ರಾಜೀವ ಗಾಂಧಿಯವರ ವಿರುದ್ಧ ತೀರಾ ಕೆಳಮಟ್ಟದ ಭಾಷಾ ಪ್ರಯೋಗ ಪ್ರಧಾನಿಯ ಘನತೆಗೆ ತಕ್ಕುದಾದುದಲ್ಲ ಎಂದು ಐವನ್ ಡಿಸೋಜ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿನಿಧಿಗಳಾದ ಎ.ಸಿ.ವಿನಯರಾಜ್, ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮನಪಾ ಸದಸ್ಯರಾದ ಅಪ್ಪಿ, ಪ್ರಕಾಶ ಸಾಲ್ಯಾನ್, ಆಶಾ ಡಿಸಿಲ್ವ ಸಿ.ಎಂ. ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು.