ಮಾದಕ ಸೇವನೆ ಆರೋಪ: ಐವರ ಬಂಧನ
ಮಂಗಳೂರು, ಮೇ 6: ಪಣಂಬೂರು ಬಳಿ ಯುವಕರ ಗುಂಪೊಂದು ಗಾಂಜಾ ಮತ್ತು ಎಂಡಿಎಂನಂತಹ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಮುಹಮ್ಮದ್ ಮುಝಾಮಿಲ್ (40), ಬಂದರ್ ಕಂಡತ್‌ಪಳ್ಳಿ ನಿವಾಸಿ ಮೆಹತಾಬ್ (27), ಕುದ್ರೋಳಿ ಕರ್ಬಲಾರೋಡ್ ನಿವಾಸಿ ಅಬ್ದುಲ್ ಜಲೀಲ್ (26), ಪಂಜಿಮೊಗರು ಶಾಂತಿನಗರ ನಿವಾಸಿ ಸ್ವಾನ್ (23), ಜೋಕಟ್ಟೆ ನಿವಾಸಿ ಆಸ್ಮಾನ್ (24) ಬಂಧಿತ ಆರೋಪಿಗಳು.
ಆರೋಪಿಗಳು ಐಒಸಿಎಲ್ ಹಿಂಭಾಗದ ಸಮುದ್ರ ತೀರದಲ್ಲಿ ಗಾಂಜಾ ಮತ್ತು ಎಂಡಿಎಂ ಸೇವನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ರೌಡಿ ನಿಗ್ರಹ ದಳದ ಅಧಿಕಾರಿ, ಸಿಬ್ಬಂದಿ ಹಾಗೂ ಪಣಂಬೂರು ಪೊಲೀಸರು ದಾಳಿ ನಡೆಸಿ ಯುವಕರನ್ನು ಬಂಧಿಸಿದ್ದಾರೆ. ಈ ಸಂದರ್ಭ ಆರೋಪಿಗಳು ಗಾಂಜಾ ಮತ್ತು ಮಾದಕ ಸೇವನೆ ಮಾಡುತ್ತಿದ್ದುದನ್ನು ಒಪ್ಪಿಕೊಂಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲೂ ಇದು ಸಾಬೀತುಗೊಂಡಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಮಾರ್ಗದರ್ಶನದಂತೆ ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಆರ್. ಗೌಡ ನಿರ್ದೇಶನದಲ್ಲಿ ಪಣಂಬೂರು ನಿರೀಕ್ಷಕ ಸತ್ಯನಾರಾಯಣ, ರೌಡಿ ನಿಗ್ರಹದಳದ ಪೊಲೀಸ್ ಉಪನಿರೀಕ್ಷಕ ಶೀತಲ್ ಅಲಗೂರು, ರೌಡಿ ನಿಗ್ರಹದಳದ ಎಎಸ್‌ಐ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಮತ್ತು ತಂಡ ಭಾಗವಹಿಸಿದೆ.