ಕಸ ನಿಯಂತ್ರಣಕ್ಕೆ ಗ್ರಾಪಂ ಸದಸ್ಯನಿಂದ ವಿನೂತನ ಪ್ರಯೋಗ
ಶಿರ್ವ, ಮೇ 7: ತನ್ನ ವಾರ್ಡನ್ನು ಕಸ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಗ್ರಾಪಂ ಸದಸ್ಯರೊಬ್ಬರು ಸಾಮಾಜಿಕ ಜಾಲತಾಣವನ್ನು ಅಸ್ತ್ರವಾಗಿ ಬಳಸಿಕೊಂಡು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಮನೆಯ ಕಸವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುವವರ ಕುರಿತು ಮಾಹಿತಿ ಅಥವಾ ಕಸ ಎಸೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾಗಿ ರುವ ವಾಟ್ಸಾಪ್ ಮೂಲಕ ಕಳುಹಿಸಿದರೆ ಬಹುಮಾನ ನೀಡುವುದಾಗಿ ಶಿರ್ವ ಗ್ರಾಪಂನ ಬಂಟಕಲ್ ವಾರ್ಡ್ ಸದಸ್ಯ ಕೆ.ಆರ್.ಪಾಟ್ಕರ್ ಘೋಷಿಸಿದ್ದಾರೆ.
ಇವರು ನಾಲ್ಕನೆ ಬಾರಿಗೆ ಇದೇ ವಾರ್ಡ್‌ನಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಇವರು ಕಸ ಹೆಕ್ಕುವ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯ ನಡೆಸಿದ್ದರು. ಮನೆಮಂದಿ ತಮ್ಮ ಮನೆಯ ಕಸಗಳನ್ನು ರಸ್ತೆ ಬದಿ ಎಸೆದು ಹೋಗುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಪಾಟ್ಕರ್, ತನ್ನ ವಾರ್ಡನ್ನು ಸ್ವಚ್ಛ ವಾರ್ಡನ್ನಾಗಿಸುವ ಹಾಗೂ ಕಸ ಎಸೆಯುವ ಅಪ್ರಜ್ಞಾವಂತರಿಗೆ ಕಾನೂನಿನ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಮಾಹಿತಿ ನೀಡಿದರೆ ಬಹುಮಾನ: ಮನೆಯ ಕಸವನ್ನು ವಾಹನಗಳಲ್ಲಿ ತಂದು ರಸ್ತೆಗೆ ಎಸೆದು ಹೋಗುವವರ ಮಾಹಿತಿ ನೀಡಿದವರಿಗೆ 500ರೂ. ಮತ್ತು ಕಸ ಎಸೆಯುತ್ತಿರುವ ಫೊಟೊವನ್ನು ವಾಟ್ಸ್ಯಾಪ್ ಮೂಲಕ ಕಳಿಸಿದವರಿಗೆ 1000 ನಗದು ಬಹುಮಾನ ನೀಡುವುದಾಗಿ ಪಾಟ್ಕರ್ ಹೇಳಿದ್ದಾರೆ.
ಈ ಕುರಿತು ಅವರು ತನ್ನ ವಾರ್ಡ್ ನಿವಾಸಿಗಳಿಗೆ ಹಾಗೂ ಸಾರ್ವಜನಿಕ ರಿಗೆ ಸಂದೇಶಗಳನ್ನು ಕಳುಹಿಸಿದ್ದು, ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ. ಸ್ವಚ್ಛತಾ ಆಂದೋಲನ ನಡೆಸುವುದರ ಜೊತೆಗೆ ಕಾನೂನಿನ ಬಿಸಿ ಮುಟ್ಟಿಸಿದಾಗ ಮಾತ್ರ ಇಂತಹ ಪ್ರವೃತ್ತಿಯನ್ನು ತಡೆಯಲು ಸಾಧ್ಯವಾಗುತ್ತದೆ ಎಂಬುದು ಪಾಟ್ಕರ್ ಅಭಿಪ್ರಾಯ.
ಕಸ ಎಸೆಯುವವರ ಫೋಟೊವನ್ನು ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಹಾಕುವ ಮೂಲಕ ವೈರಲ್ ಮಾಡಿ ಜನರೇ ಛೀಮಾರಿ ಹಾಕುವಂತೆ ಮಾಡಬೇಕಾಗುತ್ತದೆ. ಇದರೊಂದಿಗೆ ಅಂತಹವರ ವಿರುದ್ಧ ಪರಿಸರ ಸಂರಕ್ಷಣ ಕಾಯಿದೆ 1986ರಂತೆ ಕಾನೂನು ಕ್ರಮ ಜರಗಿಸಬೇಕಾಗುತ್ತದೆ ಎಂದು ಪಾಟ್ಕರ್ ತಿಳಿಸಿದ್ದಾರೆ.
ನಗದು ಬಹುಮಾನ ಘೋಷಿಸಿರುವುದರಿಂದ ಫೋಟೊ ತೆಗೆಯುವವರು ಇದ್ದಾರೆಂಬ ಅಂಜಿಕೆ ಕಸ ಎಸೆಯುವವರಲ್ಲಿ ಮೂಡುತ್ತದೆ. ಆ ಉದ್ದೇಶದಿಂದ ಇಂಥ ಪ್ರಯೋಗ ಮಾಡಲಾಗಿದೆ. ಕಸ ಎಸೆಯುವವರ ಬಗ್ಗೆ ಮಾಹಿತಿ ಕಳುಹಿಸಿ ದರೆ, ಅಂತವರ ವಿರುದ್ಧ ಗ್ರಾಪಂ ಮೂಲಕ ಕಾನೂನು ಕ್ರಮ ಜರಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಳಪು ಗ್ರಾಪಂನಿಂದಲೂ ಚಿಂತನೆ
ಈ ವಿನೂತನ ಪ್ರಯೋಗವನ್ನು ಇಡೀ ಶಿರ್ವ ಗ್ರಾಪಂ ವ್ಯಾಪ್ತಿಯಲ್ಲಿ ಜಾರಿಗೆ ತರುವಂತೆ ಸದಸ್ಯ ಕೆ.ಆರ್.ಪಾಟ್ಕರ್ ಈಗಾಗಲೇ ಗ್ರಾಪಂ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಇದರಿಂದ ಹೊರಗಿನವರು ಬಂದು ಬೇರೆ ವಾರ್ಡ್‌ಗಳಲ್ಲಿ ಕಸ ಎಸೆಯುವುದು ಕೂಡ ತಪ್ಪುತ್ತದೆ.
ಇದೀಗ ಪಾಟ್ಕರ್ ತಮ್ಮ ವಾರ್ಡ್‌ನಲ್ಲಿ ಆರಂಭಿಸಿರುವ ಈ ಅಸತ್ತವನ್ನು ಬೆಳಪು ಗ್ರಾಪಂ ತನ್ನ ಎಲ್ಲ ವಾರ್ಡ್‌ಗಳಲ್ಲಿ ಜಾರಿಗೆ ತರಲು ಚಿಂತನೆ ನಡೆಸು ತ್ತಿದೆ. ಆ ಮೂಲಕ ಕಸ ಮುಕ್ತ ಹಾಗೂ ಸ್ವಚ್ಛ ಗ್ರಾಪಂ ಮಾಡುವ ಇರಾದೆ ಬೆಳಪು ಗ್ರಾಪಂಗೆ ಇದೆ.
‘ಬಹುಮಾನ ನೀಡುವುದಕ್ಕಿಂತಲೂ ಜನರು ಫೋಟೋ ತೆಗೆಯುತ್ತಾರೆ ಎಂಬ ಅಂಜಿಕೆಗಾದರೂ ಕಸ ಎಸೆಯುವುದನ್ನು ನಿಲ್ಲಿಸುತ್ತಾರೆ. ನನ್ನ ವಾರ್ಡನ್ನು ಸ್ವಚ್ಛ ವಾರ್ಡ್ ಮಾಡಬೇಕು ಎಂಬ ಇಚ್ಛೆಯಿಂದ ಈ ಪ್ರಯತ್ನ ಮಾಡುತ್ತಿದ್ದೇನೆ. ಇಡೀ ಗ್ರಾಪಂಗೆ ಈ ಪ್ರಯೋಗವನ್ನು ವಿಸ್ತರಿಸಿದರೆ ಉತ್ತಮ. ವಿದ್ಯಾವಂತರೇ ಕಸಗಳನ್ನು ರಸ್ತೆಗಳಲ್ಲಿ ಎಸೆಯುತ್ತಿರುವುದು ಬೇಸರ ಮೂಡಿಸುತ್ತದೆ ಎನ್ನುತ್ತಾರೆ ಗ್ರಾಪಂ ಸದಸ್ಯ ಕೆ.ಆರ್.ಪಾಟ್ಕರ್.