‘ಒಂದು ಶಾಲೆಯ ಕಥೆ’ ಕನ್ನಡ ಚಲನಚಿತ್ರದ ಮುಹೂರ್ತ
ಉಡುಪಿ, ಮೇ 7: ಸೃಷ್ಠಿ ಕ್ರಿಯೇಷನ್ಸ್ ಬ್ಯಾನರ್‌ನ ‘ಒಂದು ಶಾಲೆಯ ಕಥೆ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಮಂಗಳವಾರ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಕ್ಯಾಮೆರಾ ಚಾಲನೆ ನೀಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಕಮರ್ಶಿಯಲ್ ಭರಾಟೆಯಲ್ಲಿ ಇಂದಿನ ಸಿನೆಮಾವನ್ನು ಕುಟುಂಬ ಸಮೇತವಾಗಿ ವೀಕ್ಷಿಸುವಂತಿಲ್ಲ. ಈ ಮಧ್ಯೆ ವೌಲ್ಯಾಧರಿತ ಸಿನೆಮಾಗಳು ಹೆಚ್ಚು ಹೆಚ್ಚು ಬಿಡುಗಡೆಯಾಗಬೇಕು. ಚಲನ ಚಿತ್ರದ ಮೂಲಕ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಗಂಧದ ಕುಡಿ ಚಲನಚಿತ್ರದ ನಿರ್ಮಾಪಕ ಸತ್ಯೇಂದ್ರ ಪೈ, ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಬನ್ನಂಜೆ, ಜ್ಯೋತಿಷಿ ವಿಶ್ವನಾಥ್ ಭಟ್, ಉಷಾ ವಿಶ್ವನಾಥ್ ಭಟ್, ಉದ್ಯಮಿ ಚೇತನ್ ಶೆಟ್ಟಿ, ತುಳು ಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ, ಚಲನಚಿತ್ರ ನಿರ್ದೇಶಕ ಜು. ಪ್ರಕಾಶ್ ಮುಖ್ಯ ಅತಿಥಿಗಳಾಗಿದ್ದರು.
ಸಿನೆಮಾ ನಿರ್ಮಾಪಕಿ ವಿದ್ಯಾಲತಾ ಯು.ಶೆಟ್ಟಿ ಬನ್ನಂಜೆ, ಸಹ ನಿರ್ಮಾಪಕ ರಾದ ಶಾಲಿನಿ ಸತೀಶ್ ಶೆಟ್ಟಿ ಮುಂಬೈ, ಜಯಕರ ಶೆಟ್ಟಿ ಇಂದ್ರಾಳಿ, ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು. ಸಹ ನಿರ್ದೇಶಕ ದಯಾನಂದ ಶೆಟ್ಟಿ ದೆಂದೂರು ಸ್ವಾಗತಿಸಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.