ಸಮಿತಿ ವರದಿಯಲ್ಲಿ ಅನುಮಾನವಿದ್ದಲ್ಲಿ ಸಿಬಿಐ ತನಿಖೆ: ಆಗ್ರಹ

Update: 2019-05-07 12:34 GMT

ಮಂಗಳೂರು, ಮೇ 7:ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಅಕಾಲಿಕ ಮರಣ ಸಂಶಯಕ್ಕೆ ಕಾರಣವಾಗಿದ್ದು, ಅವರಿಗೆ ನೀಡಲಾದ ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಲು ನೇಮಿಸಿದ ಸಮಿತಿಯ ವರದಿಯಲ್ಲಿ ಚಿಕಿತ್ಸೆ ಬಗ್ಗೆ ಅನುಮಾನ ವ್ಯಕ್ತವಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆ ನಡೆಸಬೇಕು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ಆಗ್ರಹಿಸಿದ್ದಾರೆ.

ಮಧುಕರ ಶೆಟ್ಟಿ ಅವರು ಹೃದಯ ಸಂಬಂಧಿ ರೋಗಕ್ಕೆ ಒಳಗಾಗಿ ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ 36 ಗಂಟೆಗಳ ಕಾಲ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲಿಲ್ಲ. ಬದಲಾಗಿ ಎಚ್1ಎನ್1ಗೆ ಚಿಕಿತ್ಸೆ ನೀಡಲಾಗಿತ್ತು ಎನ್ನುವ ಆರೋಪ ವ್ಯಕ್ತ ವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಸಮಿತಿಯೊಂದನ್ನು ನೇಮಿಸಿ ಮಧುಕರ ಶೆಟ್ಟಿ ಅವರಿಗೆ ನೀಡಲಾದ ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಿದೆ. ಡಾ.ದೇವಿಪ್ರಸಾದ್ ಶೆಟ್ಟಿ ಹಾಗೂ ಡಾ.ಪಿ.ಜಿ.ಗಿರೀಶ್ ಅವರನ್ನೊಳಗೊಂಡ ಸಮಿತಿ ಕೆಲವೇ ದಿನಗಳಲ್ಲಿ ವರದಿ ನೀಡಲಿದೆ ಎಂದವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ಪ್ರತಿಷ್ಠಿತ ಪೊಲೀಸ್ ತರಬೇತಿ ಸಂಸ್ಥೆಯೊಂದಕ್ಕೆ ಮಧುಕರ ಶೆಟ್ಟಿ ಸ್ಮರಣಾರ್ಥ ಅವರ ಹೆಸರಿನಲ್ಲಿ ‘ಡಾ.ಮಧುಕರ ಶೆಟ್ಟಿ ಪೊಲೀಸ್ ತರಬೇತಿ ಕೇಂದ್ರ’ ಎಂದು ನಾಮಕರಣ ಮಾಡಲಾಗುವುದು ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದರು. ಈ ವಿಚಾರವನ್ನು ಕಾರ್ಯರೂಪಕ್ಕೆ ತರಬೇಕು. ಮಧುಕರ ಶೆಟ್ಟಿ ತಮ್ಮ ಪೊಲೀಸ್ ಇಲಾಖೆ ಸೇವೆಯ ಸಂದರ್ಭ ಪ್ರತಿಪಾದಿಸಿದ ವೌಲ್ಯಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಅವರು ಪ್ರತಿಪಾದಿಸಿದ ವೌಲ್ಯವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಅವರ ಸ್ಮರಣಾರ್ಥ ಶಾಶ್ವತ ಕಾರ್ಯಕ್ರಮ ರೂಪಿಸಬೇಕು ಎಂದು ಚಂಗಪ್ಪ ಸರ್ಕಾರವನ್ನು ಒತ್ತಾಯಿಸಿದರು.

ವಕೀಲರಾದ ಕಿಶೋರ್ ಡಿ., ಪ್ರಮೋದ್ ಕುಮಾರ್, ವಿಜಯ್ ಮಹಂತೇಶ್ ಹಿರೇಮಠ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News