ಮೇ 12ರಂದು ಪುರುಷೋತ್ತಮ ಪೂಂಜರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ
ಉಡುಪಿ, ಮೇ 7: ಉಡುಪಿಯ ಯಕ್ಷಗಾನ ಕಲಾರಂಗ, ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಮೇ 12ರಂದು ರವಿವಾರ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಮಾರಂಭದಲ್ಲಿ ವಿತರಿಸಲಾಗುತ್ತದೆ.
ಈ ಪ್ರತಿಷ್ಠಿತ ಪ್ರಶಸ್ತಿ 40,000 ರೂ. ನಗದು ಬಹುಮಾನವನ್ನು ಹೊಂದಿದ್ದು, ಈ ವರ್ಷದ ಪ್ರಶಸ್ತಿಗೆ ಹಿರಿಯ ಭಾಗವತ, ಪ್ರಸಂಗಕರ್ತ, ಯಕ್ಷಗಾನ ಗುರು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಬೆಳಗ್ಗೆ 9:30ರಿಂದ 12:30ರವರೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಲಿದೆ.
ಬೆಳಗ್ಗೆ 9:30ಕ್ಕೆ ಕಟೀಲಿನ ಅನುವಂಶಿಕ ಮೊಕ್ತೇಸರ ಕಮಲಾದೇವಿಪ್ರಸಾದ ಅಸ್ರಣ್ಣರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರೊ. ವರದರಾಜ ಚಂದ್ರಗಿರಿ ಅವರು ಪುರುಷೋತ್ತಮ ಪೂಂಜರ ಕಾವ್ಯಾವಲೋಕನ ಮಾಡಲಿದ್ದಾರೆ. 10:15ಕ್ಕೆ ಬಹುಮುಖಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಎಂಬ ವಿಷಯದ ಕುರಿತು ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂವಾದ ಗೋಷ್ಠಿ ನಡೆಯಲಿದೆ. ಗೋಷ್ಟಿಯಲ್ಲಿ ವಾಟೆಪಡ್ಪುವಿಷ್ಣುಶರ್ಮ, ಗಣೇಶ ಕೊಲೆಕಾಡಿ, ಕೃಷ್ಣಪ್ರಕಾಶ ಉಳಿತ್ತಾಯ, ಸುನಿಲ್ ಪಲ್ಲಮಜಲು, ಸಾಯಿಸುಮಾ ಎಂ. ನಾವಡ, ಪು. ಗುುಪ್ರಸಾದ್ ಭಟ್ ಪಾಲ್ಗೊಳ್ಳಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಬೆಳಗ್ಗೆ 11:30ಕ್ಕೆ ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡಲಿದ್ದು, ಕಟೀಲು ಮೇಳಗಳ ವ್ಯವಸ್ಥಾಪಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.