ಮಳೆಗಾಲಕ್ಕೂ ಮುಂಚೆ ಚರಂಡಿಯನ್ನು ಸ್ವಚ್ಚಗೊಳಿಸುವಂತೆ ಸಹಾಯಕ ಆಯುಕ್ತ ಸಾಜಿದ ಮುಲ್ಲಾ ಆದೇಶ

Update: 2019-05-07 14:47 GMT

ಭಟ್ಕಳ: ಮಳೆಗಾಲದ ಅವಧಿಯಲ್ಲಿ ಚರಂಡಿಯ ನೀರು ರಸ್ತೆಗೆ ನುಗ್ಗಿ ಸೃಷ್ಟಿಯಾಗುವ ಅವಾಂತರವನ್ನು ತಪ್ಪಿಸಲು ಸ್ವತಃ ತಾವೇ ರಸ್ತೆಗೆ ಇಳಿದ ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ, ಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆಗಾಲದ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸುವಂತೆ ಆದೇಶ ನೀಡಿದರು.

ತಾಲೂಕಿನ ರಂಗಿಕಟ್ಟೆ, ಸಂಶುದ್ದೀನ್ ಸರ್ಕಲ್, ಮಣ್ಕುಳಿ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಅವರು ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು. ಮಳೆಗಾಲಕ್ಕೆ ಹೆಚ್ಚು ಕಡಿಮೆ ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೂ ನೀರು ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ಪ್ರಮುಖವಾಗಿ ಸಂಶುದ್ದೀನ್ ಸರ್ಕಲ್ ಮತ್ತು ರಂಗಿಕಟ್ಟೆಯಲ್ಲಿ ಹೆದ್ದಾರಿಯೇ ಕೆರೆಯಂತಾಗುತ್ತದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗುವುದಲ್ಲದೇ ಪಾದಾಚಾರಿಗಳಿಗೂ ನಡೆದಾಡುವುದು ಕಷ್ಟವಾಗುತ್ತದೆ. ಪುರಸಭಾ ಆಡಳಿತ ಈ ಬಗ್ಗೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು. ಎಲ್ಲಿಯೂ ಮಳೆಗಾಲದ ನೀರು ಹರಿಯಲು ಅಡೆತಡೆ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಹಣಕಾಸಿನ ತೊಂದರೆ ಇಲ್ಲ. ಆದಷ್ಟು ಶೀಘ್ರವಾಗಿ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ದೇವರಾಜ್, ಅಭಿಯಂತರ ಉಮೇಶ ಮಡಿವಾಳ ಉಪಸ್ಥಿತರಿದ್ದರು.

ಶರಾಬಿ ಹೊಳೆಯಲ್ಲಿ ಅಪಾಯ: ರೈತರಿಗೆ ನೀರು ಕೊಡಲು ಇಲ್ಲಿನ ಶರಾಬಿ ಹೊಳೆಯ ಪಕ್ಕದಲ್ಲಿ ಕಿರು ಆಣೆಕಟ್ಟನ್ನು ಕಟ್ಟಲಾಗಿದೆ. ಆದರೆ ಆಣೆಕಟ್ಟಿನ ಆಸುಪಾಸಿನಲ್ಲಿ ಹೊಳೆಯಲ್ಲಿಯೇ ಅನಗತ್ಯವಾಗಿ ಮಣ್ಣನ್ನು ಶೇಖರಿಸಿಡಲಾಗಿದೆ. ಕೆಲಸ ಮುಗಿದರೂ ಮಣ್ಣನ್ನು ತೆರವುಗೊಳಿಸದೇ ಇರುವುದರಿಂದ ಈ ಮಳೆಗಾಲದಲ್ಲಿ ನೀರು ಹೊಳೆಯ ಎರಡೂ ದಂಡೆಯ ಮೇಲೆ ನುಗ್ಗಿ ಬರುವ ಎಲ್ಲ ಸಾಧ್ಯತೆ ಇದೆ. ರು.2ಕೋಟಿಯಷ್ಟನ್ನು ವ್ಯಯಿಸಿ ಕಾಮಗಾರಿ ನಡೆಸಲಾಗಿದ್ದು, ಜನರಿಗೆ ಕಾಮಗಾರಿಯಿಂದ ಉಪಯೋಗವಾಗುವ ಬದಲು ಅಪಾಯ ಎದುರಾಗುವಂತಾದರೆ ಇಂತಹ ಕೆಲಸವಾದರೂ ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮೊದಲೇ ಹೊಳೆಯಲ್ಲಿ ಊಳು ತುಂಬಿಕೊಂಡಿದ್ದು, ಹೊಳೆಯ ನೀರಿನ ಸಂಗ್ರಹ ಸಾಮಥ್ರ್ಯವೂ ಕಡಿಮೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಹೊಳೆಗೆ ಇನ್ನಷ್ಟು ಮಣ್ಣನ್ನು ಸುರಿದಿರುವುದರಿಂದ ಇದು ಇನ್ನಷ್ಟು ಯಾತನೆಗೆ ದಾರಿ ಮಾಡಿಕೊಡಲಿದೆ ಎನ್ನುತ್ತಾರೆ ಇಲ್ಲಿನ ಜನರು. ಈ ಬಗ್ಗೆ ತಾಲೂಕಾಡಳಿತ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News