ಉಡುಪಿ ಜಿಲ್ಲೆಯ ವಿಕಲಚೇತನರಿಗೆ ದೊರೆಯಲಿದೆ ಕೃತಕ ಅವಯವ

Update: 2019-05-07 15:31 GMT

ಉಡುಪಿ, ಮೇ 7: ಉಡುಪಿ ಜಿಲ್ಲೆಯ ವಿಕಲಚೇತನರು ಇನ್ನು ಕೃತಕ ಅವಯವಗಳ ಹುಡುಕಾಟಕ್ಕೆ ಶ್ರಮ ಪಡಬೇಕಿಲ್ಲ, ಖಾಸಗಿಯಲ್ಲಿ ದುಬಾರಿ ಬೆಲೆ ತೆರುವ ಅವಗ್ಯವಿಲ್ಲ. ವಿಕಲಚೇತನರು ಸಾಮಾನ್ಯರಂತೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಅನುಕೂಲವಾಗುವಂತ ಕೃತಕ ಅವಯವಗಳು ಇನ್ನು ಉಡುಪಿಯಲ್ಲೇ ದೊರೆಯಲಿದೆ.

ಪ್ರಸ್ತುತ ಉಡುಪಿ ರೆಡ್‌ಕ್ರಾಸ್ ಭವನದಲ್ಲಿ ಈ ಕೃತಕ ಅವಯವ ತಯಾರಿಕೆ ಮತ್ತು ಜೋಡಣಾಕೇಂದ್ರ ಮೇ 8ರಿಂದ ಪ್ರಾರಂಗೊಳ್ಳಲಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಆರಂಭವಾಗಿರುವ ಈ ಕೇಂದ್ರದಲ್ಲಿ ಮೊದಲ ಹಂತದಲ್ಲಿ ಕಾಲಿಗೆ ಸಂಬಂಧಿಸಿದ ಕೃತಕ ಅವಯವಗಳ ತಯಾರಿಕೆ ಮತ್ತು ಜೋಡಣೆ ನಡೆಯಲಿದೆ. ಈ ಅವಯವಗಳ ಜೋಡಣೆಗೆ ಮುಂಚೆ ಅವುಗಳ ಬಳಕೆ ಬಗ್ಗೆ ಫಲಾನುಭವಿಗಳಿಗೆ ಸೂಕ್ತ ತರಬೇತಿಯನ್ನು ನೀಡಿ ನಂತರ ಅವುಗಳನ್ನು ಜೋಡಿಸಲಾಗುವುದು. ಇದರಿಂದ ವಿಕಲಚೇತನರು ಸಾಮಾನ್ಯ ರಂತೆ ಓಡಾಡಲು ಮತ್ತು ದೈನಂದಿನ ತಮ್ಮ ಕೆಲಸಗಳನ್ನು ಯಾರ ನೆರವೂ ಇಲ್ಲದೇ ಮಾಡಿಕೊಳ್ಳಲು ಸಾಧ್ಯವಾಗಲಿದೆ.

ಈ ಕೇಂದ್ರದಲ್ಲಿ ಉಡುಪಿ ಜಿಲ್ಲೆಯ ವಿಕಲಚೇತನರಿಗೆ ಮಾತ್ರ ಕೃತಕ ಅವಯವ ನೀಡಲಿದ್ದು, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಂಪೂರ್ಣ ಉಚಿತವಾಗಿ ಮತ್ತು ಇತರರಿಗೆ ರಿಯಾಯತಿ ದರದಲ್ಲಿ ಅವಯವಗಳನ್ನು ತಯಾರಿಸಿ ಕೊಡಲಾಗುವುದು. ಇದುವರೆಗೆ ಮಣಿಪಾಲದ ಕೆಎಂಸಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಇಂತಹ ಅವಯವಗಳು ದೊರೆಯುತ್ತಿದ್ದು, ಅವುಗಳ ದರ ಸಹ ದುಬಾರಿಯಾಗಿತ್ತು.

ಮೊಣಕಾಲು ಮಡಚಲು ಅಗತ್ಯವಿರುವ ಕೃತಕ ಕಾಲು, ಮೊಣಕಾಲಿನಿಂದ ಕೆಳಗೆ ಅಳವಡಿಸಬಹುದಾದ ಕೃತಕ ಕಾಲುಗಳನ್ನು ಪ್ರಸ್ತುತ ತಯಾರಿಸಲಾಗುತ್ತಿದೆ. ಈಗಾಗಲೇ 8 ಕಾಲುಗಳನ್ನು ತಯಾರಿಸಿದ್ದು, ಮೇ 8ರಂದು ನಡೆಯುವ ವಿಶ್ವ ರೆಡ್‌ಕ್ರಾಸ್ ದಿನಾಚರಣೆಯಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಇವುಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ಮನೆ ಮನೆ ಭೇಟಿ ನೀಡಿ ವಿಕಲಚೇತನರನ್ನು ಗುರುತಿಸುವ ಕೆಲಸ ಮಾಡಿದ್ದು, ಸುಮಾರು 17,000 ವಿಕಲಚೇತರನ್ನು ಈವರೆಗೆ ಗುರುತಿಸಲಾಗಿದೆ. ಇವರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ವಿವಿಧ ಸ್ವಉದ್ಯೋಗ ತರಬೇತಿಗಳು, ಪುರ್ನವಸತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಮುಂದಿನ ಹಂತದಲ್ಲಿ ಈ ಕೃತಕ ಅವಯವ ತಯಾರಿಕೆ ಮತ್ತು ಜೋಡಣಾ ಕೇಂದ್ರದಲ್ಲಿ, ಕೈ,ಬೆನ್ನು ಸೇರಿದಂತೆ ದೇಹದ ಇತರೆ ಎಲ್ಲಾ ಭಾಗಗಳಿಗೆ ಅಗತ್ಯ ವಿರುವ ಕೃತಕ ಅವಯವ ತಯಾರಿಸಲು ಈ ಕೇಂದ್ರವನ್ನು 80 ಲಕ್ಷ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು ಎಂದು ಹೊಸದಿಲ್ಲಿಯ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ ತಿಳಿಸಿದ್ದಾರೆ.

ಈ ಕೃತಕ ಅವಯವ ತಯಾರಿಕಾ ಕೇಂದ್ರದಲ್ಲಿ ಈ ಹಿಂದೆ ಕೆಎಂಸಿಯಲ್ಲಿ ಕೃತಕ ಅವಯವ ತಯಾರಿಕೆಯಲ್ಲಿ ಅಪಾರ ಅನುಭವ ಹೊಂದಿ, ನಿವೃತ್ತ ರಾಗಿರುವ, ಕೃತಕ ಅವಯವ ತಯಾರಿಕಾ ಇಂಜಿನಿಯರ್ ಸತೀಶನ್ ಮತ್ತು ಪದ್ಮನಾಭ ಆಚಾರ್ಯ ಕಾರ್ಯ ನಿರ್ವಹಿಸಲಿದ್ದು, ಅಯಯವ ತಯಾರಿಕೆಗೆ ಅಗತ್ಯವಿದ್ದ ಕಚ್ಚಾ ವಸ್ತು ಮತ್ತು ಬಿಡಿಭಾಗಗಳು ಪೂನಾದಿಂದ ಕಡಿಮೆದರದಲ್ಲಿ ಸರಬರಾಜಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News