ಸ್ವರ್ಣೆಯ ಭಂಡಾರಿಬೆಟ್ಟುವಿನಲ್ಲಿ ಡ್ರೆಜ್ಜಿಂಗ್ ಕಾರ್ಯಾರಂಭ
ಉಡುಪಿ, ಮೇ 7: ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಬರಿದಾಗಿರುವ ಹಿನ್ನೆಲೆಯಲ್ಲಿ ಸ್ವರ್ಣ ನದಿಯ ಭಂಡಾರಿ ಬೆಟ್ಟು ಎಂಬಲ್ಲಿ ಮಂಗಳವಾರ ಡ್ರೆಜ್ಜಿಂಗ್ ಕಾರ್ಯ ಆರಂಭಿಸಲಾಗಿದ್ದು, ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯ ತಡರಾತ್ರಿ ವರೆಗೂ ಮುಂದು ವರೆದಿದೆ.
ಈವರೆಗೆ ನೀರು ಬಜೆ ಅಣೆಕಟ್ಟಿಗೆ ಹರಿದು ಬಾರದಿರುವುದರಿಂದ ರಾತ್ರಿ ಪಂಪಿಂಗ್ ಕಾರ್ಯ ನಡೆದಿಲ್ಲ. ಇದರ ಪರಿಣಾಮ ಮೇ 8ರಂದು ಸಹ ನಗರಕ್ಕೆ ನೀರು ಪೂರೈಕೆ ಕಷ್ಟಸಾಧ್ಯವಾಗಿದೆ. ಆದರೂ ಕೆಲವು ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲು ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದ್ದರೂ ಸೋಮವಾರ ಸಂಜೆಯವರೆಗೆ ಡ್ರಜ್ಜಿಂಗ್ ಕಾರ್ಯ ಆರಂಭಿಸದ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು. ಈ ಬಗ್ಗೆ ನಿರ್ಲಕ್ಷ ವಹಿಸಿರುವ ಅಧಿಕಾರಿ ಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ತಡರಾತ್ರಿವರೆಗೂ ಬಜೆ ಅಣೆಕಟ್ಟು ಹಾಗೂ ಭಂಡಾರಿಬೆಟ್ಟುವಿನಲ್ಲಿ ಬೀಡುಬಿಟ್ಟು ಡ್ರೆಜ್ಜಿಂಗ್‌ಗೆ ಸಿದ್ಧತೆ ಗಳನ್ನು ನಡೆಸಿದ್ದರು.
ಹಗಲಿರುಳು ನಿರಂತರ ಡ್ರೆಜ್ಜಿಂಗ್: ಬಜೆ ಅಣೆಕಟ್ಟಿನಿಂದ ಮೂರು ಕಿ.ಮೀ. ದೂರದ ಭಂಡಾರಿಬೆಟ್ಟುವಿನಲ್ಲಿ ಇಂದು ಬೆಳಗ್ಗೆಯಿಂದ ಗುತ್ತಿಗೆದಾರ ಪ್ರವೀಣ್ ನೇತೃತ್ವದ ತಂಡ ಮೂರು ಬೋಟುಗಳಲ್ಲಿ 110 ಎಚ್‌ಪಿ ಪಂಪ್ ಗಳನ್ನು ಆಳವಡಿಸಿ ನೀರು ಹಾಯಿಸುವ ಕಾರ್ಯ ಆರಂಭಿಸಿದೆ.
ಸುಮಾರು 12 ಕಾರ್ಮಿಕರು ಈ ಕಾರ್ಯದಲ್ಲಿ ನಿರತರಾಗಿದ್ದು, ರಾತ್ರಿಯ ವರೆಗೂ ಡ್ರೆಜ್ಜಿಂಗ್ ಕಾರ್ಯ ಮುಂದುವರೆದಿದೆ. ಈ ನೀರು ಪುತ್ತಿಗೆ ಸೇತುವೆ ಅಡಿಭಾಗದ ಮೂಲಕ ಹರಿದು ಪುತ್ತಿಗೆ ಮಠದ ಎದುರಿನ ಹಳ್ಳದಲ್ಲಿ ಶೇಖರಣೆ ಯಾಗಿರುವ ನೀರನ್ನು ಸೇರಿಕೊಳ್ಳಲಿದೆ. ಅಲ್ಲಿಂದ ನಂತರ ಈ ನೀರು ಬಜೆ ಅಣೆಕಟ್ಟು ಸೇರಲಿದೆ.
ನೀರು ಬಜೆ ಸೇರುವಾಗ ತಡರಾತ್ರಿ ಅಥವಾ ನಾಳೆಯೂ ಆಗಬಹುದೆಂದು ಅಂದಾಜಿಸಲಾಗಿದೆ. ಅದರ ನಂತರವೇ ನೀರನ್ನು ಪಂಪಿಂಗ್ ಮಾಡಿ ಶುದ್ಧೀಕರಣಗೊಳಿಸಿ ನಗರಕ್ಕೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಸದ್ಯ ಭಂಡಾರಿಬೆಟ್ಟುವಿನಲ್ಲಿ ಮಾತ್ರ ಡ್ರೆಜ್ಜಿಂಗ್ ಮಾಡಲಾಗುತ್ತಿದೆ.
ಹಳ್ಳದಲ್ಲಿ 15 ಅಡಿ ಹೂಳು: ಭಂಡಾರಿಬೆಟ್ಟುವಿನಲ್ಲಿ ಸಂಗ್ರಹವಾಗಿರುವ ನೀರಿನ ಹಳ್ಳದಲ್ಲಿ ಸುಮಾರು 15 ಅಡಿಯಷ್ಟು ಹೂಳು ತುಂಬಿದ್ದು, ಈ ಹೂಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿದರೆ ಇನ್ನಷ್ಟು ನೀರು ಸಿಗಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಭಂಡಾರಿಬೆಟ್ಟು ನಂತರ ಪುತ್ತಿಗೆ ಮಠದ ಕೆಳಭಾಗ ಮತ್ತು ಮೇಲ್ಭಾಗದಲ್ಲೂ ನೀರಿನ ಸಂಗ್ರಹವಿದ್ದು, ಸದ್ಯ ಭಂಡಾರಿಬೆಟ್ಟುವಿನಿಂದ ಹರಿದು ಬಂದ ನೀರು ಪುತ್ತಿಗೆ ಮಠದ ಸಮೀಪ ಇರುವ ನೀರಿನೊಂದಿಗೆ ಹರಿದು ಸಾಗುವುದರಿಂದ ಬೇರೆ ಕಡೆ ಡ್ರೆಜ್ಜಿಂಗ್ ಕಾರ್ಯ ಅಗತ್ಯ ಇರುವುದಿಲ್ಲ ಎಂಬ ಅಧಿಕಾರಿಗಳು ಹೇಳುತ್ತಾರೆ.
ಒಂದು ವೇಳೆ ಪುತ್ತಿಗೆ ಮಠದ ಬಳಿ ಹರಿವು ಸ್ಥಗಿತಗೊಂಡರೆ, ಮುಂದೆ ಅಲ್ಲಿಂದ ಡ್ರೆಜ್ಜಿಂಗ್ ಮಾಡಿ ಬಜೆಗೆ ನೀರು ಹಾಯಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಮೂರು ಪಂಪ್‌ಗಳ ಪೈಕಿ ಒಂದು ಬೋಟು ಸಹಿತ ಪಂಪ್‌ನ್ನು ಭಂಡಾರಿಬೆಟ್ಟು ಮತ್ತು ಉಳಿದ ಎರಡು ಬೋಟು ಸಹಿತ ಪಂಪ್ ಗಳನ್ನು ಪುತ್ತಿಗೆ ಮಠದ ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಅಳವಡಿಸಿ ಡ್ರೆಜ್ಜಿಂಗ್ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದ್ಯ ಸ್ವರ್ಣ ನದಿ ಯಲ್ಲಿ 20 ದಿನಗಳಿಗೆ ಬೇಕಾದ ನೀರು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರಕ್ಕೊಮ್ಮೆ ನೀರು ಪೂರೈಕೆ ?
ಬಜೆ ಅಣೆಕಟ್ಟಿನಲ್ಲಿ ನೀರಿನ ಕೊರತೆ ಹಾಗೂ ಮಳೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಈಗ ನೀಡುವ ಮೂರು ದಿನಗಳ ಬದಲು ವಾರಕ್ಕೊಮ್ಮೆ ನೀರು ಪೂರೈಸಲು ತೀರ್ಮಾಸಿದೆ ಎಂದು ತಿಳಿದು ಬಂದಿದೆ.
ಪ್ರತಿದಿನ ನಗರಕ್ಕೆ 24 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, ಅದನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುವುದು ಅಸಾಧ್ಯ. 30 ಟ್ಯಾಂಕರಿನಲ್ಲಿ ಕೇವಲ 0.5 ಎಂಎಲ್‌ಡಿಯಷ್ಟು ನೀರು ಮಾತ್ರ ಪೂರೈಸಲು ಸಾಧ್ಯವಾಗುತ್ತದೆ. ಸ್ವರ್ಣ ನದಿಯಲ್ಲಿ ನೀರು ಸಾಕಷ್ಟು ಪ್ರಮಾಣ ದಲ್ಲಿರುವುದರಿಂದ ಟ್ಯಾಂಕರ್ ನೀರು ಸರಬರಾಜಿಗೆ ನಗರಸಭೆ ಮುಂದಾಗುತ್ತಿಲ್ಲ.
ಪ್ರಸ್ತುತ ಬಜೆ ಅಣೆಕಟ್ಟಿನ ಟ್ಯಾಂಕ್‌ನಲ್ಲಿ ಈಗಾಗಲೇ ಫಿಲ್ಟರ್ ಮಾಡಿರುವ ನೀರಿನ ಸಂಗ್ರಹವಿದ್ದು, ಅದನ್ನು ಮಣಿಪಾಲದಲ್ಲಿರುವ ನೀರು ಶುದ್ದೀಕರಣ ಘಟಕ್ಕೆ ಸರಬರಾಜು ಮಾಡಿ ವಾರ್ಡ್‌ಗಳಿಗೆ ಪೂರೈಕೆ ಮಾಡಲು ಸಿದ್ಧಪಡಿಸಿ ಇಡಲಾಗುತ್ತದೆ. ಇತ್ತ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರುತ್ತಿದ್ದಂತೆ ಪಂಪಿಂಗ್ ಕಾರ್ಯ ಆರಂಭಿಸಲಾಗುತ್ತದೆ.
‘ಡ್ರೆಜ್ಜಿಂಗ್ ಕಾರ್ಯ ರಾತ್ರಿ ಇಡೀ ನಡೆಸಲಾಗುತ್ತಿದ್ದು, ಬಜೆ ಅಣೆಕಟ್ಟಿಗೆ ನೀರಿನ ಹರಿವು ಆರಂಭವಾದ ಕೂಡಲೇ ಪಂಪಿಂಗ್ ಮಾಡಲಾಗುತ್ತದೆ. ನಾಳೆ ಬೆಳಗ್ಗೆ ಪಂಪಿಂಗ್ ಕಾರ್ಯ ನಡೆಸಿ, ನಗರಸಭೆ ವ್ಯಾಪ್ತಿಯ ಕಲ್ಮಾಡಿ, ಕೊಡ ವೂರು, ಪಾಳೆಕಟ್ಟೆಗಳಿಗೆ ನೀರು ಪೂರೈಸಲಾಗುತ್ತದೆ. ನದಿಯಲ್ಲಿ ನೀರಿನ ಸಂಗ್ರಹ ಬೇಕಾದಷ್ಟಿದೆ. ಮಳೆ ಬರುವವರೆಗೆ ನೀರಿಗೆ ಯಾವುದೇ ಸಮಸ್ಯೆ ಆಗಲ್ಲ’
-ಆನಂದ ಕಲ್ಲೋಳಿಕರ್, ಪೌರಾಯುಕ್ತರು, ಉಡುಪಿ
ಶಾಸಕರಿಂದ ಡ್ರೆಜ್ಜಿಂಗ್ ಪರಿಶೀಲನೆ: ಉಡುಪಿ ಶಾಸಕ ಕೆ.ರಘುಪತಿ ಭಟ್ ಪಂಪಿಂಗ್ ನಡೆಯುವ ಭಂಡಾರಿಬೆಟ್ಟು ಪ್ರದೇಶಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಅದೇ ರೀತಿ ಪೌರಾಯುಕ್ತ ಆನಂದ ಕಲ್ಲೋಳಿಕರ್, ಸಹಾಯಕ ಎಕ್ಸಿಕ್ಯುಟಿವ್ ಇಂಜಿನಿಯರ್ ಗಣೇಶ್ ಕೆ., ಪರಿಸರ ಇಂಜಿನಿಯರ್ ರಾಘವೇಂದ್ರ ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ, ಗಿರಿಧರ ಆಚಾರ್ಯ, ಪ್ರಮುಖರಾದ ಚಂದ್ರಶೇಖರ್ ಕರಂಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.