ತುಂಬೆಯಿಂದ ಪೂರೈಕೆಯಾಗುವ ನೀರಿನ ಪೈಪ್‌ಲೈನ್ ಅಸುರಕ್ಷಿತ

Update: 2019-05-08 07:03 GMT

ಬಂಟ್ವಾಳ, ಮೇ 7: ತುಂಬೆಯಿಂದ ಮಂಗಳೂರಿಗೆ ಪೂರೈಕೆ ಯಾಗುವ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಅಸುರಕ್ಷಿತ ಸ್ಥಿತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯ ವಿವಿಧ ಕಡೆಗಳಲ್ಲಿ ಹಾದುಹೋಗುವ ಪೈಪ್‌ಲೈನ್ ಮೇಲೆ ಮತ್ತೆ ಮಣ್ಣಿನ ರಾಶಿ ಸುರಿದಿದ್ದಲ್ಲದೆ, ಪೈಪ್‌ಲೈನ್‌ನ ಪಕ್ಕದಲ್ಲೇ ಕಾಮಗಾರಿಯ ಬೃಹತ್ ಕಾಂಕ್ರಿಟ್ ಪಿಲ್ಲರನ್ನು ಹಾಕಲಾಗಿದೆ. ಇದರಿಂದ ಮಳೆಗಾಲದಲ್ಲಿ ಮಣ್ಣಿನ ಭಾರ ಹೆಚ್ಚಾಗಿ ಮತ್ತೆ ನೀರಿನ ಪೈಪ್ ಒಡೆಯುವ ಸಾಧ್ಯತೆಯಿದೆ.

ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ರಾಮಲ್‌ಕಟ್ಟೆ ತಿರುವಿನಲ್ಲಿ ತುಂಬೆಯಿಂದ ನೀರು ಪೂರೈಕೆ ಮಾಡುವ ಪೈಪ್ ಹಾದುಹೋಗಿದೆ. ಈ ಪೈಪ್‌ಲೈನ್‌ನ ಮೇಲೆಯೇ ಖಾಸಗಿ ಕೆಂಪನಿವೊಂದು ಮಣ್ಣು ಹಾಕಿದ್ದಲ್ಲದೆ, ಜಮೀನಿಗೆ ಹೋಗಲು ರಸ್ತೆಯನ್ನು ಮಾಡಿದೆ. ಅದಲ್ಲದೆ, ಪೈಪ್‌ಲೈನ್‌ಗೆ ತಾಗಿಕೊಂಡೇ ಕಾಮಗಾರಿಯ ಬೃಹತ್ ಕಾಂಕ್ರಿಟ್ ಪಿಲ್ಲರನ್ನು ಹಾಕಿದೆ. ಪೈಪ್ ಸುತ್ತ ಹುಲ್ಲಿನ ರಾಶಿ ಬೆಳೆದಿದೆ. ಉಳಿದಂತೆ ಅಡ್ಯಾರ್, ಕಣ್ಣೂರು ಹಾಗೂ ಆರ್ಕುಳ ಪ್ರದೇಶಗಳಲ್ಲಿ ಇದೇ ನೀರಿನ ಪೈಪ್‌ನ ಮೇಲೆ ಮಣ್ಣು ಹಾಕಿದ್ದು, ತಮ್ಮ ಸ್ಥಳಗಳಿಗೆ ತೆರಳಲು ದಾರಿಯನ್ನು ಮಾಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಮಣ್ಣಿನ ಒತ್ತಡದಿಂದ ಪೈಪ್ ಒಡೆಯುವ ಸಾಧ್ಯತೆ ಇದ್ದರೂ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪ.

‘‘ತುಂಬೆಯ ಸಮೀಪ ರಾಮಲ್‌ಕಟ್ಟೆಯಲ್ಲಿ ಹಾದುಹೋಗಿರುವ ಪೈಪ್ ನೆಲದಿಂದ ಮುಕ್ಕಾಲು ಭಾಗ ಮೇಲಿದೆ. ಇದಕ್ಕೆ ಸಿಮೆಂಟ್‌ನಿಂದ ಕವಚ ಮಾಡಲಾಗಿದ್ದು, ಈ ಪೈಪ್‌ನ ಎರಡೂ ಕಡೆಯಲ್ಲೂ ಮಣ್ಣು ಹಾಗೂ ಪಿಲ್ಲರನ್ನು ಹಾಕಲಾಗಿದೆ. ಇವರಿಗೆ ಎನ್‌ಒಸಿ ನೀಡಿದವರಾರು ಎಂಬುವುದು ಗೊತ್ತಿಲ್ಲ?. ಭಾರಿ ಅನಾಹುತ ಸಂಭವಿಸುವ ಮೊದಲು ಮನಪಾ ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಮೂಲಕ ಮುಖ್ಯ ಕೊಳವೆ ನಿರ್ವಹಣೆ ಮಾಡಬೇಕಾಗಿದೆ’’ ಎಂದು ಹೆಸರು ಹೇಳಲು ಇಚ್ಛಿಸದ ಇಂಜಿಯರ್‌ವೋರ್ವರು ಮಾಹಿತಿ ನೀಡಿದ್ದಾರೆ.

2015ರ ಅನಾಹುತ ಮರುಕಳಿಸದಿರಲಿ: ತುಂಬೆಯಿಂದ ಎರಡು ಬೃಹತ್ ಗಾತ್ರದ ಪೈಪ್‌ಲೈನ್‌ಗಳ ಮೂಲಕ ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುತ್ತಿರುವ ಪೈಪ್‌ಗಳ ಮೇಲೆ ಕಣ್ಣೂರು ಪ್ರದೇಶದಲ್ಲಿ ಖಾಸಗಿಯವರು ಅವೈಜ್ಞಾನಿಕವಾಗಿ ಲೋಡ್‌ಗಟ್ಟಲೆ ಮಣ್ಣು ಸುರಿದು, ತಮ್ಮ ಸ್ಥಳಗಳಿಗೆ ದಾರಿ ಮಾಡಿಕೊಂಡಿದ್ದರು. 2015ರ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಮಣ್ಣಿನ ಭಾರ ಹೆಚ್ಚಾಗಿ ಮುಖ್ಯ ಪೈಪ್‌ಗಳು ಒಡೆದು ಹೋಗಿದ್ದವು. ಪರಿಣಾಮ ಮಂಗಳೂರು ನಗರಕ್ಕೆ ಐದು ದಿನಗಳ ನೀರಿಲ್ಲದೆ ಜನತೆ ತತ್ತರಿಸಿದ್ದರು. ಪೈಪ್ ಮೇಲೆ ಹಾಕಿದ್ದ ಮಣ್ಣನ್ನು ಕೂಡ ಮನಪಾ ವತಿಯಿಂದಲೇ ತೆರವುಗೊಳಿಸುವ ಕಾರ್ಯಾಚರಣೆ ಮಾಡಲಾಗಿತ್ತು.

ಸಭೆಗೆ ಸೀಮಿತವಾಯಿತೇ ಮನಪಾ ಆದೇಶ?: ಈ ಅನಾಹುತ ಬಳಿಕ ಸಭೆ ನಡೆಸಿದ ಆಗಿನ ಜಿಲ್ಲಾಧಿಕಾರಿ ಮತ್ತು ಶಾಸಕರು ಮನಪಾ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದರು. ನೀರಿನ ಪೈಪ್‌ಲೈನ್ ಮೇಲೆ ಮಣ್ಣು ಸುರಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಹಾಗೂ ಮುಖ್ಯ ಪೈಪ್‌ಲೈನ್ ಬದಿಯ ಜಮೀನು ಗಳ ಮಾಲಕರು ತಮ್ಮ ಭೂ ಪರಿವರ್ತನೆ ಮಾಡುವಾಗ ಮಹಾನಗರ ಪಾಲಿಕೆ ಎನ್‌ಒಸಿ ಪತ್ರ ಪಡೆಯಬೇಕೆಂದು ಸೂಚಿಸಿದ್ದರು. ಆದರೆ, ಪೈಪ್ ಮೇಲೆ ಮಣ್ಣು ಹಾಕಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯೂ ದಾಖಲಾಗಿಲ್ಲ. ಮಣ್ಣು ತೆರವುಗೊಳಿಸುವ ಕಾರ್ಯವೂ ನಡೆದಿಲ್ಲ. ಆದೇಶ ಸಭೆಗೆ ಮಾತ್ರ ಸೀಮಿತವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಬಗ್ಗೆ ದೂರುಗಳು ಬಂದಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿದೆ. ತುಂಬೆಯಲ್ಲಿ ಹಾದುಹೋಗಿರುವ ಪೈಪ್‌ಲೈನ್ ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಜಾಗದಲ್ಲಿದೆ. ಇಲ್ಲಿ ಪೈಪ್‌ಗೆ ತಾಗಿಗೊಂಡು ಕಾಂಕ್ರಿಟ್‌ಅನ್ನು ಹಾಕಲಾಗಿದ್ದು, ಇದನ್ನು ತೆರವು ಮಾಡುವಂತೆ ಸೂಚಿದ್ದೇವೆ. ಅದಲ್ಲದೆ, ಕಂಪೆನಿಯ ವಿರುದ್ಧ ನೊಟೀಸನ್ನು ಜಾರಿಗೊಳಿಸಿದ್ದೇವೆ. ಮಣ್ಣಿನೊಳಗೆ ಹೂತಿರುವ ಪೈಪ್‌ಲೈನ್ ಮೇಲೆ ಸೇತುವೆ ನಿರ್ಮಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ನಿರ್ಲಕ್ಷ ವಹಿಸಿದ್ದಲ್ಲಿ ಇದನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು ಮತ್ತು ಪೊಲೀಸ್ ದೂರು ನೀಡಲಾಗುವುದು.

 ಲಿಂಗೇಗೌಡ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮನಪಾ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News