ಇಸ್ರೇಲಿ ವಾಯುಪಡೆಗಳ ವಿರುದ್ಧ ಗಾಝಾದೊಂದಿಗೆ ಐಕಮತ್ಯ: ಇ. ಅಬೂಬಕರ್‌‌‌‍‍‍

Update: 2019-05-08 09:39 GMT

ಮಂಗಳೂರು: ಇಸ್ರೇಲಿ ವಾಯುಪಡೆಗಳ ವಿರುದ್ಧ ಗಾಝಾ ಸಂತ್ರಸ್ತರೊಂದಿಗೆ ತಮ್ಮ ಐಕಮತ್ಯವನ್ನು ವ್ಯಕ್ತಪಡಿಸಿರುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕರ್‌‌‌‍‍‍ ತಿಳಿಸಿದ್ದಾರೆ.

ಇಸ್ರೇಲ್ ಪ್ರಾರಂಭಿಸಿದ ಮತ್ತೊಂದು ವಾಯುದಾಳಿಯು ಗರ್ಭಿಣಿ ಮತ್ತು ಅವರ ಹದಿನಾಲ್ಕು ತಿಂಗಳು ವಯಸ್ಸಿನ ಸೋದರ ಮಗಳು ಸೇರಿದಂತೆ ಹಲವು ನಾಗರಿಕರನ್ನು ಕೊಂದು ಹಾಕಿದೆ ಮತ್ತು ಅನೇಕರನ್ನು ಗಾಯಗೊಳಿಸಿರುವುದು ತೀವ್ರ ದುಃಖಕರವಾಗಿದೆ ಮತ್ತು ಅತಿಕ್ರಮಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶ್ವದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಗಾಝಾದ ಜನರ ಮೇಲೆ ಇಸ್ರೇಲ್ ಪಡೆ ನಿರಂತರವಾಗಿ ನಡೆಸುತ್ತಿರುವ ದಾಳಿಗಳು ಮತ್ತು ದಿಗ್ಭಂಧನವು ಗಾಝಾದ ಜನರ ಸಾಮೂಹಿಕ ನರಮೇಧದ ಭಾಗವಾಗಿದೆ. 2006ರಿಂದ ಆರಂಭವಾದ ಇಸ್ರೇಲ್ ಆಕ್ರಮಣಗಳು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡು ಹಲವು ಸಾವಿರ ಜನರನ್ನು ಶಾಶ್ವತವಾಗಿ ಅಂಗವಿಕಲರನ್ನಾಗಿ ಮಾಡಿದ್ದನ್ನು ಜಗತ್ತು ವೀಕ್ಷಿಸುತ್ತಿದೆ. 2006ರಲ್ಲಿ ಆಹಾರ, ಔಷಧ ಮತ್ತು ಇಂಧನ ಮುಂತಾದ ಮೂಲಭೂತ ಅವಶ್ಯಕತೆಗಳ ಒಳಹರಿವನ್ನು ತಡೆಯುವ ಮೂಲಕ ಇಸ್ರೇಲ್ ಹೇರಿದ ಮಾರಣಾಂತಿಕ ಮತ್ತು ಅಮಾನವೀಯ ದಿಗ್ಭಂಧನ  ಗಾಝಾದ ಜನರನ್ನು ಈಗಾಗಲೇ ಕುತ್ತಿಗೆ ಹಿಸುಕಿದಂತೆ ಮಾಡಿದ್ದನ್ನು ಗಮನಿಸಬೇಕು. ಈ ದಿಗ್ಭಂಧನದಿಂದಾಗಿ ಈ ಪ್ರದೇಶವು ಅಕ್ಷರಶಃ ವಿಶ್ವದ ಅತ್ಯಂತ ದೊಡ್ಡ ಮುಕ್ತ ಜೈಲಾಗಿ ಮಾರ್ಪಟ್ಟಿದೆ ಎಂದು ಇ. ಅಬೂಬಕ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ. 

ಈಜಿಪ್ಟಿನ ದಲ್ಲಾಳಿ ಕದನ ವಿರಾಮ ಒಪ್ಪಂದವು ಇಸ್ರೇಲ್ ಮತ್ತು ಫೆಲೆಸ್ತೀನಿಯನ್ ಬಣಗಳ ನಡುವೆ ತಲುಪಿದ್ದರೂ, ಪರಿಸ್ಥಿತಿ ಮಾತ್ರ ಇನ್ನೂ ಅನಿಶ್ಚಿತ ವಾಗಿಯೇ ಉಳಿದಿದೆ. ಆದಾಗ್ಯೂ, ಕೇವಲ ಕದನ ವಿರಾಮದಿಂದ ಗಾಝಾದ ಜನರಿಗೆ ಪರಿಹಾರ ಸಿಗಲು‌ ಸಾಧ್ಯವಿಲ್ಲ. ಅವರ ಮೇಲೆ‌ ಹೇರಿರುವ ದಿಗ್ಭಂಧನ ಮತ್ತು ಈಗ ನಡೆಯುತ್ತಿರುವ ಅಕ್ರಮ ನೆಲೆಗಳಿಗೆ ಅಂತ್ಯ ಹಾಡುವ ಮೂಲಕವೇ ಈ ಸಮಸ್ಯೆಗೆ‌  ಶಾಶ್ವತವಾದ ಪರಿಹಾರ ಕಾಣಲು ಸಾಧ್ಯವಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಗಾಝಾ ಮೇಲಿನ ದಿಗ್ಭಂಧನವನ್ನು ಹಿಂಪಡೆಯಲು, ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ವಿಶ್ವ ನಾಯಕರಲ್ಲಿ ಪಾಪ್ಯುಲರ್ ಫ್ರಂಟ್ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News