ದತ್ತು ಪಡೆದ ಮಗುವಿಗೆ ನರ ದೌರ್ಬಲ್ಯ: ದಾನಿಗಳ ನಿರೀಕ್ಷೆಯಲ್ಲಿ ಕಾಪು ಮಲ್ಲಾರಿನ ಕುಟುಂಬ

Update: 2019-05-08 11:17 GMT

ಕಾಪು: ದತ್ತು ತೆಗೆದುಕೊಂಡಿದ್ದ ಮಗು ನರದೌರ್ಬಲ್ಯದಿಂದ ಬಳಲುತಿದ್ದು, ಕುಟುಂಬ ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದೆ.

ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರಿನ ಕೋಟೆ ರಸ್ತೆಯ ನಿವಾಸಿ ಅಹಮದ್ ಗೌಸ್ ಮತ್ತು ಗುಲ್ಜಾರ್ ಬಾನು ಎಂಬವರು ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದ ಕೊರಗಿನಲ್ಲಿದ್ದರು. ಈ ವೇಳೆ ಸ್ಥಳೀಯರ ಹಾಗೂ ಸ್ನೇಹಿತರ ಸಲಹೆಯಂತೆ ಮುಂಬೈಯಲ್ಲಿ ಮಗುವೊಂದನ್ನು ದತ್ತು ಪಡೆದುಕೊಂಡರು. ದತ್ತು ಪಡೆದುಕೊಂಡ ಮಗುವಿಗೆ ಗುಲಾಬ್ ಶಾ ಬಾನು ಎಂದು ನಾಮಕರಣ ಮಾಡಿದರು. ಈಗ ಈ ಮಗುವಿಗೆ ವರ್ಷ 18 ತುಂಬಿತು. ಆದರೆ ಬೆಳವಣಿಗೆ ಮಾತ್ರ ಇಲ್ಲ. ಈ ಮಗು ಮಾತನಾಡಿದರೂ ಅರ್ಥವಾಗುವುದಿಲ್ಲ. ಪ್ರತಿಯೊಂದಕ್ಕೂ ಪೋಷಕರ ಸಹಾಯ ಬೇಕಾಗುತ್ತದೆ. 18ವರ್ಷಗಳಿಂದಲೂ ಈ ಮಗುವಿನ ಲಾಲನೆ, ಪಾಲನೆಯನ್ನು ಈ ಪೋಷಕರು ಮಾಡಿಕೊಂಡು ಬಂದಿದ್ದಾರೆ. 

1 ತಿಂಗಳಲ್ಲಿಯೇ ಜ್ವರ: ಮಗುವಿಗೆ ತಿಂಗಳು ಒಂದು ಆಗುವ ವೇಳೆಗೆ ಜ್ವರ ಕಾಣಿಸಿಕೊಂಡಿತು. ಬಳಿಕ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಂಡರು. ಮಗುವಿಗೆ ಜ್ವರ ಕ್ರಮೇಣ ಕಡಿಮೆಯಾಯಿತು. ಆದರೆ ಮಗು ಮಾತ್ರ ಬೆಳವಣಿಗೆ ಆಗಲಿಲ್ಲ. ಚಿಂತಿತರಾದ ಪೋಷಕರು ಮಗುವಿಗೆ ಮುಂಬಯಿಯ ಹಲವಡೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ಹುಟ್ಟೂರಿಗೆ ಆಗಮಿಸಿ ಮಂಗಳೂರು, ಉದ್ಯಾವರ, ಕಾರ್ಕಳ, ಉಡುಪಿ, ಮಣಿಪಾಲ, ಉಡುಪಿ, ಚಿಕ್ಕಮಗಳೂರು ಸಹಿತ ಹಲವು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಂಡರು. ಯಾವುದೇ ಫಲ ಕಾಣಲಿಲ್ಲ. ಅದಾಗಲೇ ಮಗುವಿನ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚಾಗಿತ್ತು. 

ಆಸ್ತಿ, ಪಾಸ್ತಿ ಮಾರಾಟ: ಅಹಮದ್ ಗೌಸ್ ಅವರು ಮುಂಬಯಿಯಲ್ಲಿ ಗ್ಯಾರೇಜ್ ನಡೆಸುತಿದ್ದರು. ಆದರೆ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡು ಮುಂಬೈಯಲ್ಲಿ ಚೇತರಿಕೊಳ್ಳದೆ ಇರುವುದರಿಂದ ಮುಂಬಯಿಯಲ್ಲಿದ್ದ ತನ್ನ ಸ್ವಂತ ಮನೆ ಹಾಗೂ ಗ್ಯಾರೇಜ್ ಮಾರಾಟ ಮಾಡಿ ಊರಿಗೆ ಮರಳಿದರು. ಊರಿನಲ್ಲೂ ಹಲವು ಕಡೆ ಚಿಕಿತ್ಸೆ ನೀಡಿದರು. ಮತ್ತೆ ಚಿಕಿತ್ಸೆಗಾಗಿ ಊರಿನಲ್ಲಿದ್ದ ಮನೆ ಹಾಗೂ ಸ್ವಂತ ಜಾಗವನ್ನು ಮಾರಾಟ ಮಾಡಬೇಕಾಯಿತು. ಇದೇ ವೇಳೆ ಅಹಮದ್ ಅವರಿಗೆ ವಾಹನ ಅಪಘತದಲ್ಲಿ ಎರಡು ಕೈಗೆ ಗಂಭೀರ ಗಾಯಗೊಂಡು ಶಸ್ತ್ರ ಚಿಕಿತ್ಸೆಯಾಗಿದೆ. ಮಗುವಿನ ಚಿಕಿತ್ಸೆ ಹಾಗೂ ಅವರ ಚಿಕಿತ್ಸೆಗೆಂದೇ ಹಣವನ್ನು ಇದುವರೆಗೂ ಖರ್ಚು ಮಾಡಿದ್ದಾರೆ. 

ಇದೀಗ ಮಲ್ಲಾರಿನ ಕೋಟೆ ರಸ್ತೆಯ ಮಸೀದಿ ಬಳಿ ಇರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಿಂಗಳಿಗೆ ಮೂರು ಸಾವಿರ ರೂ. ಬಾಡಿಗೆ ನೀಡಬೇಕಾಗಿದೆ. ಇದರೊಂದಿಗೆ ಮಗುವಿನ ಚಿಕಿತ್ಸೆಗೂ ಹಣ ವ್ಯಯಿಸಬೇಕಾಗಿದೆ. 

ಸಂತಾನ ಆಗಿರಲಿಲ್ಲ ಎಂಬ ಕಾರಣಕ್ಕೆ ಒಂದು ದಿನದ ಹೆಣ್ಣು ಮಗು ತಂದು ಸಾಕಿದ್ದೇನೆ. 7ದಿನಗಳಲ್ಲಿ ಆ ಮಗುವಿಗೆ ಕಾಣಿಸಿಕೊಂಡ ಜ್ವರದಿಂದ ಕೈ ಕಾಲು ಬಲವಿಲ್ಲದಂತಾಗಿದೆ. ಇದಕ್ಕಾಗಿ ವೈದ್ಯರಲ್ಲಿ ಲಕ್ಷಾಂತರ ರೂ. ಖರ್ಚಾಗಿದೆ. ಆದರೂ ಕಾಯಿಲೆ ಗುಣವಾಗಿರಲಿಲ್ಲ. ಗಂಡನಿಗೆ ಅಪಘತವಾಗಿ 2 ಕೈಗೆ ಶಸ್ತ್ರ ಚಿಕಿತ್ಸೆ ಆಗಿದೆ. ಹಾಗಾಗಿ ಅವರಿಂದ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ ಮನೆ ಖರ್ಚು ಬಾಡಿಗೆ, ಗಂಡ ಮತ್ತು ಮಗುವಿನ ಖರ್ಚು ನಿಭಾಯಿಸಲು ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ಗುಲ್ಜಾರ್ ಬಾನು. ಈ ಕುಟುಂಬ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. 
ದಾನಿಗಳಿದ್ದಲ್ಲಿ ಈ ಕೆಳಗಿನ ಬ್ಯಾಂಕ್ ಅಕೌಂಟ್‍ಗೆ ಅಥವಾ ನೇರವಾಗಿ ಸಂಪರ್ಕಿಸಬಹುದು.
ಹೆಸರು : ಗುಲ್ಜಾರ್ ಬಾನು

ಬ್ಯಾಂಕ್ : ವಿಜಯ ಬ್ಯಾಂಕ್, ಕಾಪು ಶಾಖೆ

ಅಕೌಂಟ್ ಸಂಖ್ಯೆ : 111601011002480

ಈಎಫ್‍ಎಸ್‍ಸಿ: ವಿಐಜೆಬಿ0001116

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News