ಬೈಲೂರು ವಾರ್ಡ್‌ನಲ್ಲಿ ನೀರಿನ ಅಭಾವ: ಸ್ವಂತ ಖರ್ಚಿನಲ್ಲಿ ನೀರು ಪೂರೈಸುತ್ತಿರುವ ನಗರಸಭೆ ಸದಸ್ಯ

Update: 2019-05-08 13:02 GMT

ಉಡುಪಿ, ಮೇ 8: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ 31ನೆ ಬೈಲೂರು ವಾರ್ಡಿನ ಸದಸ್ಯ ರಮೇಶ್ ಕಾಂಚನ್ ತಮ್ಮ ಸ್ವಂತ ಖರ್ಚಿನಲ್ಲಿ ವಾರ್ಡ್ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ.

ರಮೇಶ್ ಕಾಂಚನ್ ಕಳೆದ 15 ದಿನಗಳಿಂದ ತನ್ನ ವಾರ್ಡ್‌ನಲ್ಲಿ ನೀರಿನ ಅವಶ್ಯಕತೆ ಇರುವ ನೂರಾರು ಮನೆಗಳಿಗೆ ಉಚಿತವಾಗಿ ನೀರು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ನಗರಸಭೆಯಿಂದ ನೀರು ಸರಬರಾಜಾಗುತ್ತಿದ್ದ ಸಂದರ್ಭದಲ್ಲಿ ಒತ್ತಡದ ಕೊರತೆಯಿಂದ ನೀರು ಪೂರೈಕೆಯಾಗದ ಮನೆಗಳಿಗೆ ಇವರು ತನ್ನದೆ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದರು.

ಇದೀಗ ಕಳೆದ ನಾಲ್ಕೈದು ದಿನಗಳಿಂದ ನಗರಸಭೆಯಿಂದ ನೀರು ಸ್ಥಗಿತ ಗೊಂಡಿರುವುದರಿಂದ ಎಲ್ಲಡೆ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಕಳೆದ ಆರು ದಿನಗಳಿಂದ ನೀರು ಬಾರದೆ ಕಂಗೆಟ್ಟ ಬೈಲೂರು ವಾರ್ಡ್‌ನ ಭಾಗ್ಯ ಮಂದಿರದ 35 ಮನೆಗಳಿಗೆ ರಮೇಶ್ ಕಾಂಚನ್ ಎರಡು ಟ್ಯಾಂಕರ್‌ನಲ್ಲಿ 24 ಸಾವಿರ ಲೀಟರ್ ನೀರು ಸಬರರಾಜು ಮಾಡಿದ್ದಾರೆ.

‘ಅಂದ್ರಾದೆ ಲೇನ್, ಕೊಳಂಬೆ, ಚಿಟ್ಪಾಡಿಗಳಿಗೆ ಈಗಾಗಲೇ ಹಲವು ಬಾರಿ ನೀರು ಪೂರೈಸಿದ್ದು, ಇದೀಗ ಈ ಎಲ್ಲ ಕಡೆಗಳಲ್ಲಿ ನೀರಿಗೆ ಹೆಚ್ಚಿನ ಬೇಡಿಕೆಗಳು ಬರುತ್ತಿವೆ. ನಾಳೆಯಿಂದ ಈ ಪ್ರದೇಶಗಳಲ್ಲಿ ಎರಡೆರೆಡು ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುವುದು’ ಎಂದು ಸದಸ್ಯ ರಮೇಶ್ ಕಾಂಚನ್ ತಿಳಿಸಿದ್ದಾರೆ.

‘2017ರಲ್ಲಿ ಇದೇ ರೀತಿ ನೀರಿನ ಸಮಸ್ಯೆಯಾಗಿದ್ದಾಗ ನಗರಸಭೆಯಿಂದಲೇ ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿತ್ತು. ಅಲ್ಲದೆ ನೀರಿನ ಮೂಲಗಳಾದ ಬಾವಿಗಳನ್ನು ಸುಸ್ಥಿತಿಯಲ್ಲಿಡಲಾಗಿತ್ತು. ಆದರೆ ಈ ಬಾರಿ ಇಂತಹ ಯಾವುದೇ ಕಾರ್ಯ ಆಗದ ಕಾರಣ ವಾರ್ಡ್ ನಿವಾಸಿಗಳಿಗೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ನಾನೇ ನನ್ನ ಸ್ವಂತ ಖರ್ಚಿನಲ್ಲಿ ನೀರಿನ ವ್ಯವಸ್ಥೆಯನ್ನು ಮಾಡು ತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News