ಪಲಿಮಾರು ಮಠಕ್ಕೆ ಶಿಷ್ಯ ಸ್ವೀಕಾರ ಪ್ರಕ್ರಿಯೆ ಪ್ರಾರಂಭ
ಉಡುಪಿ, ಮೇ 8: ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥರು ಪಲಿಮಾರಿನಲ್ಲಿರುವ ತಮ್ಮದೇ ಸಂಸ್ಥೆಯಾದ ಶ್ರೀಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುತ್ತಿರುವ ಕೊಡವೂರು ಕಂಬ್ಳಕಟ್ಟ ಗ್ರಾಮದ ಸುರೇಂದ್ರ ಉಪಾಧ್ಯಾಯ ಹಾಗೂ ಲಕ್ಷ್ಮೀ ಸುರೇಂದ್ರ ಉಪಾದ್ಯಾಯ ದಂಪತಿಗಳ ಹಿರಿಯ ಪುತ್ರ ಶೈಲೇಶ ಉಪಾಧ್ಯಾಯ ಎಂಬ ವಟುವನ್ನು ಮಠದ ಉತ್ತರಾಧಿಕಾರಿಯಾಗಿ ನೇಮಿಸಲು ಈಗಾಗಲೇ ನಿರ್ಧರಿಸಿದ್ದು, ಸನ್ಯಾಸತ್ವ ಸ್ವೀಕಾರದ ಪೂರ್ವಭಾವಿ ಸಿದ್ಧೆಗಳು ಇಂದು ಪ್ರಾರಂಭಗೊಂಡವು.
ಇಂದು ಶೈಲೇಶ ಉಪಾದ್ಯಾಯ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಶ್ರೇಯಪ್ರಾಪ್ತಿಗಾಗಿ ಗಣಹೋಮ, ಬ್ರಹ್ಮಕೂರ್ಚ, ತಿಲಹೋಮ, ಕೂಷ್‌ಮಾಂಡ ಹೋಮ, ಪವಮಾನ ಹೋಮ, ನವಗ್ರಹ ಹೋಮ, ಸಂಜೀವಿನಿ ಮೃತ್ಯುಂಜಯ ಮೊದಲಾದ ಸರ್ವಪ್ರಾಯಶ್ಚಿತ್ತ ಹೋಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ವಟುವಿನ ಮಾತಾ ಪಿತೃಗಳು ಹಾೂ ಕುಟುಂಬಿಕರು ಉಪಸ್ಥಿತರಿದ್ದರು.
ಇದೇ ವೇಳೆ ಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಶ್ರೀಗಳು ಮೇ 12ರಂದು ತಮ್ಮ ಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಲಿರುವ ಶೈಲೇಶ ಉಪಾದ್ಯಾಯರಿಗೆ ಋಗ್ವೇದ ಮಂಗಲವನ್ನು ನಡೆಸಿದರು.