ಬಸ್ತಿ, ಮಾಣಾಯಿ ಗ್ರಾಮದ ಜನತೆಗೆ ನೀರು ನೀಡಿದ ರಘುಪತಿ ಭಟ್
ಉಡುಪಿ, ಮೇ 8: ಬಜೆ ಅಣೆಕಟ್ಟಿನಿಂದ ನೀರು ತೆಗೆಯಲು ಅಡ್ಡಿಪಡಿಸಿದ ಅಧಿಕಾರಿಗಳ ವಿರುದ್ಧ ಸೆಟೆದು ನಿಂತು ಜೆಸಿಬಿಗೆ ಅಡ್ಡಲಾಗಿ ನಿಂತು ನೀರಿಗಾಗಿ ಬೇಡಿಕೆ ಇರಿಸಿ ಪ್ರತಿಭಟನೆ ನಡೆಸಿದ ಬಸ್ತಿ ಹಾಗೂ ಮಾಣಾಯಿ ಗ್ರಾಮದ ಜನತೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ತಮ್ಮದೇ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ನೀಡಲು ವ್ಯವಸ್ಥೆ ಮಾಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಭಟ್, ಗ್ರಾಮಸ್ಥರ ಮನವೊಲಿಸಿ ತನ್ನ ಖರ್ಚಿನಿಂದಲೇ ಜನತೆಗೆ ನೀರು ನೀಡಲು ಮುಂದಾದರು. ಗ್ರಾಮಕ್ಕೆ ಪ್ರತ್ಯೇಕ ಟ್ಯಾಂಕರ್ ಒಂದನ್ನು ನೀಡಿ ಮುಂದಿನ ಹದಿನೈದು ದಿನಗಳ ಕಾಲ ನೀರು ಪೂರೈಸಲು ಒಪ್ಪಿಕೊಂಡರು. ಶಾಸಕರ ಈ ಕ್ರಮದ ನಂತರ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂದೆಗೆದಿದ್ದಾರೆ.
ಇಂದಿನಿಂದ ಇನ್ನೂ ನಾಲ್ಕು ಪಂಪುಗಳನ್ನು ತರಿಸಲಾಗಿದ್ದು, ಇದರಿಂದ ನೀರನ್ನು ಡ್ರೆಜ್ಜಿಂಗ್ ಮೂಲಕ ಬಜೆ ಅಣೆಕಟ್ಟಿನತ್ತ ಹರಿದು ಬಿಡಲಾಗುತ್ತಿದೆ. ಈ ಮೂಲಕ ಉಡುಪಿ ನಗರಕ್ಕೆ ಮತ್ತೆ ನೀರು ನೀಡಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಸಕರು ದಿನದಲ್ಲಿ ಹಲವು ಬಾರಿ ಬಜೆ ಹಾಗೂ ಡ್ರೆಜ್ಜಿಂಗ್ ನಡೆಯುತ್ತಿರುವ ಭಂಡಾರಿಬೆಟ್ಟು ಪ್ರದೇಶಕ್ಕೆ ಭೇಟಿ ನೀಡಿ ಕೆಲಸದ ಪ್ರಗತಿ ಪರಿಶೀಲಿಸುತಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.