ತುರ್ತು ಸಭೆ ನಡೆಸಲು ಶಾಸಕರಿಗೆ ಅನುಮತಿ ನೀಡಿ ಮುಖ್ಯ ಕಾರ್ಯದರ್ಶಿಗೆ ರಘುಪತಿ ಭಟ್ ಪತ್ರ

Update: 2019-05-08 16:52 GMT

ಉಡುಪಿ, ಮೇ8: ಕುಡಿಯುವ ನೀರು ಹಾಗೂ ನೆರೆ ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ನಡೆಸಲು ಶಾಸಕರಿಗೆ ಅನುಮತಿ ನೀಡುವಂತೆ ಕೋರಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದಿದ್ದಾರೆ.

ಉಡುಪಿ ನಗರದಲ್ಲಿ ಈವರೆಗೆ ಕಂಡರಿಯದ ರೀತಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಕಳೆದ ಐದು ದಿನಗಳಿಂದ ಉಡುಪಿ ನಗರಕ್ಕೆ ಒಂದು ಹನಿ ನೀರು ಕೂಡಾ ನಳ್ಳಿ ಮೂಲಕ ಸರಬರಾಜಾಗುತ್ತಿಲ್ಲ. ಉಡುಪಿ ನಗರಕ್ಕೆ ನೀರು ಸರಬರಾಜು ಮಾಡುವ ಸ್ವರ್ಣ ನದಿ ಸಂಪೂರ್ಣ ಬತ್ತಿ ಹೋಗಿದೆ. ಜನರು ಒಂದೊಂದು ಕೊಡಪಾನ ನೀರಿಗಾಗಿ ಪರದಾಡುತಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಉಡುಪಿ ನಗರಸಭೆಯಲ್ಲಿ ಚುನಾಯಿತ ಆಡಳಿತ ಇಲ್ಲದೇ ಇರುವುದರಿಂದ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದರೂ, ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳು ನಗರದ ಜನತೆಗೆ ನೀರು ನೀಡಲು ಗಂಭೀರ ಪ್ರಯತ್ನ ಮಾಡದೇ ವಿಲಂಬ ನೀತಿ ಅನುಸರಿಸುತಿದ್ದಾರೆ. ಇದಕ್ಕಾಗಿ ಅಧಿಕಾರಿಗಳ ಸಭೆ ಕರೆಯಲು ಚುನಾವಣಾ ನೀತಿ ಸಂಹಿತೆಯ ಸಬೂಬು ನೀಡುತಿದ್ದಾರೆ.

ಹೀಗಾಗಿ ರಾಜ್ಯದಲ್ಲಿ ಈಗಾಗಲೇ ಚುನಾವಣೆ ಮುಗಿದಿರುವುದರಿಂದ ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಅಧಿಕಾರಿಗಳೊಂದಿಗೆ ತುರ್ತಾಗಿ ಸಭೆ ನಡೆಸಲು ಅನುಮತಿ ನೀಡುವಂತೆ ಹಾಗೂ ಜನತೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವಂತೆ ರಘುಪತಿ ಭಟ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News