ವಿದೇಶಕ್ಕೆ ಗಾಂಜಾ ಸಾಗಾಟ: ಆರೋಪಿಗೆ ಐದು ವರ್ಷ ಜೈಲು

Update: 2019-05-08 16:54 GMT

ಮಂಗಳೂರು, ಮೇ 8: ವಿದೇಶಕ್ಕೆ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ ಆರೋಪಿಗೆ ದ.ಕ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಐದು ವರ್ಷ ಕಾರಾಗೃಹ ವಾಸ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿದೆ.

ಕಾಸರಗೋಡು ನೀಲೇಶ್ವರ ನಿವಾಸಿ ಅಮಲ್ ದೇವ್ ಶಿಕ್ಷೆಗೊಳಗಾದ ಆರೋಪಿ.

ಪ್ರಕರಣ ವಿವರ: ಆರೋಪಿ ಅಮಲ್‌ದೇವ್ 2013ರ ಸೆಪ್ಟಂಬರ್ 21ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 1.470 ಗ್ರಾಂ ಗಾಂಜಾ ಹಾಗೂ 24 ಗಾಂಜಾ ಚಾಕಲೆಟ್‌ನ್ನು ವಿದೇಶಕ್ಕೆ ಸಾಗಾಟ ಮಾಡಲು ಯತ್ನಿಸಿದ್ದನು. ಏರ್ ಇಂಡಿಯಾ ಸೆಕ್ಯುರಿಟಿಯ ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಮುಂದಿನ ಕ್ರಮಕ್ಕೆ ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಅಂದಿನ ಪೊಲೀಸ್ ನಿರೀಕ್ಷಕ ದಿನಕರ್ ಶೆಟ್ಟಿಯವರು ತನಿಖಾ ಸಹಾಯಕ ಪ್ರಕಾಶಮೂರ್ತಿ ಸಹಾಯ ಪಡೆದು ತನಿಖೆ ನಡೆಸಿ, ಆರೋಪಿತನ ವಿರುದ್ಧ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಆರೋಪಿ ಅಮಲ್‌ದೇವ್ ತಲೆಮರೆಸಿ ಕೊಂಡಿದ್ದರಿಂದ ಪ್ರಕರಣವು ಎಲ್‌ಪಿಸಿ (ಲಾಂಗ್ ಪೆಂಡಿಂಗ್ ಕೇಸ್)ಯಾಗಿ ಪರಿವರ್ತಿತಗೊಂಡಿದ್ದ ಸಮಯ ಹೆಡ್‌ಕಾನ್‌ಸ್ಟೇಬಲ್ ರಾಮ ನಾಯ್ಕ ಅವರಿಗೆ ಮೇಲಾಧಿಕಾರಿ ಸೂಚನೆಯಂತೆ ಮಾರ್ಗದರ್ಶನ ನೀಡಿ ವಿಶೇಷ ಕರ್ತವ್ಯದಲ್ಲಿ ಕಳುಹಿಸಿದ ಇಂದಿನ ಪೊಲೀಸ್ ನಿರೀಕ್ಷ ಪರಶಿಮೂರ್ತಿ ಆರೋಪಿಯನ್ನು ಕೇರಳದ ನಿಲೇಶ್ವರದಲ್ಲಿ ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಆರೋಪಿಯ ವಿಚಾರಣೆ ಕೈಗೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿತನಿಗೆ ಐದು ವರ್ಷ ಕಾರಾಗೃಹ ವಾಸ ಮತ್ತು ಒಂದು ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪುಷ್ಪರಾಜ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News