ಮುಂದುವರೆದ ಡ್ರೆಡ್ಜಿಂಗ್: ಮೇ 9ರಿಂದ ಉಡುಪಿ ನಗರಕ್ಕೆ ನೀರು

Update: 2019-05-08 16:56 GMT

ಉಡುಪಿ, ಮೇ 8: ಬಜೆ ಅಣೆಕಟ್ಟಿಗೆ ಸ್ವರ್ಣ ನದಿಯ ಹಳ್ಳದಲ್ಲಿ ತುಂಬಿರುವ ನೀರನ್ನು ಹಾಯಿಸುವ ನಿಟ್ಟಿನಲ್ಲಿ ಭಂಡಾರಿಬೆಟ್ಟುವಿನಲ್ಲಿ ನಡೆಸುತ್ತಿರುವ ಡ್ರೆಡ್ಜಿಂಗ್ ಕಾರ್ಯ ಬುಧವಾರವೂ ಮುಂದುವರೆದಿದ್ದು, ನಾಳೆಯಿಂದ ನಗರಕ್ಕೆ ನೀರು ಪೂರೈಸುವುದಾಗಿ ಪೌರಾಯುಕ್ತ ಆನಂದ ಕಲ್ಲೋಳಿಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಜೆ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಡ್ರೆಡ್ಜಿಂಗ್ ಮೂಲಕ ನೀರನ್ನು ಜಾಕ್‌ವೆಲ್‌ಗೆ ಹಾಯಿಸಿಕೊಂಡು ಮೇ 9ರಂದು ನಿಗದಿ ಪಡಿಸಿದ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. ಬೆಳಗ್ಗೆ ಅವಶ್ಯವಿರುವ ನೀರಿನ ಪ್ರಮಾಣ ಲಭ್ಯತೆ ಇಲ್ಲದಿದ್ದಲ್ಲಿ ಅಪರಾಹ್ನದ ನಂತರ ನೀರು ಸರಬರಾಜು ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೊಡ್ಡಣಗುಡ್ಡೆ, ಕರಂಬಳ್ಳಿ, ಜನತಾ ಕಾಲೋನಿ, ನೇಕಾರರ ಕಾಲೋನಿ, ವಿ.ಎಂ.ನಗರ ರೈಲ್ವೆ ಸೇತುವೆವರೆಗೆ, ಪೋಲಿಸ್ ಕ್ವಾಟ್ರಾಸ್, ಚಕ್ರತೀರ್ಥ, ಪಾಡಿ ಗಾರು ಮಠ, ಗುಂಡಿಬೈಲು ಶಾಲಾ ವಠಾರ, ಕಲ್ಸಂಕ ಗುಂಡಿಬೈಲು ರೋಡ್, ಅಡ್ಕದ ಕಟ್ಟೆ, ನಿಟ್ಟೂರು, ವಿಷ್ಣುಮೂರ್ತಿ ನಗರ, ಕಡಿಯಾಳಿ, ಕೆ.ಇ.ಬಿ ಕ್ವಾಟ್ರಸ್, ಕಾತ್ಯಾಯನಿ ನಗರ, ಎಂ.ಜಿ.ಎಂ. ಕ್ವಾಟ್ರಸ್, ಸಗ್ರಿ ರೇಲ್ವೆ ಸೇತುವೆವರೆಗೆ, ಗೋಪಾಲಪುರ, ನಯಂಪಳ್ಳಿ, ಸಂತೆಕಟ್ಟೆ, ಅಂಬಾಗಿಲು, ಕಕ್ಕುಂಜೆ, ಪ್ರಭಾಕರ್ ಲೇಔಟ್, ಕುದುರೆ ಕಲ್ಸಂಕದವರೆಗೆ, ನಿಟ್ಟೂರು ಶಾಲೆ ಬಳಿ, ಹನುಮಂತ ನಗರ, ರಾಜೀವ್ ನಗರಗಳಿಗೆ ಮೇ 9ರಂದು ನೀರು ಪೂರೈಕೆ ಮಾಡಲಾಗುತ್ತದೆ.

ಹರಿದು ಬಾರದ ನೀರು: ಭಂಡಾರಿಬೆಟ್ಟುವಿನಲ್ಲಿ ಎರಡನೆ ದಿನವೂ ನಡೆಸು ತ್ತಿರುವ ಡ್ರೆಡ್ಜಿಂಗ್ ಕಾರ್ಯ ಮುಂದುವರೆದಿದ್ದು, ಆದರೆ ಸಂಜೆ ವರೆಗೆ ಅಲ್ಲಿನ ನೀರು ಬಜೆ ಅಣೆಕಟ್ಟಿಗೆ ಹರಿದು ಬಂದಿಲ್ಲ. ಪ್ರಸ್ತುತ ಬಜೆಯಲ್ಲಿ 80 ಸೆ.ಮೀ. ನೀರಿನ ಸಂಗ್ರಹ ಮಾತ್ರ ಇದೆ.

ನಿನ್ನೆ ಬೆಳಗ್ಗೆಯಿಂದ ಮೂರು ಬೋಟುಗಳಲ್ಲಿ ಡ್ರೆಜ್ಜಿಂಗ್ ಕಾರ್ಯ ಆರಂಭಿ ಸಿದ್ದು, ರಾತ್ರಿ ಇಡೀ ಸೇರಿದಂತೆ ಇಂದು ಸಂಜೆಯವರೆಗೂ ಮುಂದು ವರೆಸಲಾಗಿದೆ. ಆದರೆ ಭಂಡಾರಿಬೆಟ್ಟುವಿನ ನೀರು ಈವರೆಗೆ ಬಜೆ ಅಣೆಕಟ್ಟಿಗೆ ಹರಿದು ಬಂದಿಲ್ಲ. ಹೀಗಾಗಿ ಬಜೆಯಲ್ಲಿ ಪಂಪಿಂಗ್ ಕಾರ್ಯ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆವರೆಗೆ ದಿನದ 24 ಗಂಟೆಗಳ ಕಾಲವೂ ಬಜೆಯಲ್ಲಿ ಪಂಪಿಂಗ್ ಮಾಡಲಾಗುತ್ತಿತ್ತು. ಕೆಲವು ದಿನಗಳ ಹಿಂದಿನಿಂದ ದಿನಕ್ಕೆ 18 ಗಂಟೆಗಳ ಕಾಲ ಮಾತ್ರ ಪಂಪಿಂಗ್ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಕೇವಲ 10ಗಂಟೆ ಪಂಪಿಂಗ್ ಮಾಡಲು ಮಾತ್ರ ಸಾಧ್ಯ ವಾಗಲಿದೆ ಎಂದು ಬಜೆ ಅಣೆಕಟ್ಟಿನ ಸಿಬ್ಬಂದಿ ತಿಳಿಸಿದ್ದಾರೆ.

‘ಇಂದು ಬೆಳಗ್ಗೆ ಮಲ್ಪೆ, ಕಲ್ಮಾಡಿ, ಕೊಡವೂರು, ಪಾಳೆಕಟ್ಟೆಗಳಿಗೆ ನೀರು ಪೂರೈಕೆ ಮಾಡಲಾಗಿದೆ. ಮುಂದೆ ಮೂರು ದಿನಗಳಿಗೊಮ್ಮೆಯೊ ಅಥವಾ ವಾರಕ್ಕೊಮ್ಮೆಯೊ ನೀರು ಪೂರೈಕೆ ಮಾಡುವ ಬಗ್ಗೆ ನೀರಿನ ಸಂಗ್ರಹ ಪರಿಶೀಲಿಸಿ ನಿರ್ಧರಿಸಬೇಕಾಗಿದೆ’ ಎಂದು ಉಡುಪಿ ಪೌರಾಯುಕ್ತ ಆನಂದ ಕಲ್ಲೋಳಿಕರ್ ತಿಳಿಸಿದ್ದಾರೆ.

ಬಜೆ ಡ್ಯಾಂನಲ್ಲಿ ಶ್ರಮದಾನ

ಬಜೆ ಡ್ಯಾಂನಲ್ಲಿ ನೀರಿನ ಸಂಗ್ರಹವಿದ್ದರೂ ಅದರಲ್ಲಿ ಕಸ ಕಡ್ಡಿಗಳು ಹೂಳು ತುಂಬಿರುವುದರಿಂದ ನೀರು ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ. ಆದ್ದರಿಂದ ಜಲ ರಾಶಿಯ ಉಳಿವಿಗಾಗಿ ಮೇ 9ರಂದು ಬೆಳಗ್ಗೆ 8.30ಕ್ಕೆ ಶ್ರಮದಾನದ ಮೂಲಕ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲ ಮತ್ತು ಈ ಪ್ರದೇಶದಲ್ಲಿ ಹೂಳು ತುಂಬಿದ್ದು ನೀರಿನ ಹರಿವಿಗೆ ಅಡೆತಡೆ ಉಂಟಾಗಿದೆ. ಆದುದರಿಂದ ಬಜೆ ಡ್ಯಾಂ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಶ್ರಮದಾನದಲ್ಲಿ ಭಾಗವಹಿಸುವ ಮೂಲಕ ನಗರಸಭೆ ಜೊತೆ ಕೈ ಜೋಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News