ದ.ಕ. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಭೆ
ಮಂಗಳೂರು, ಮೇ 9: ದ.ಕ. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ 6ನೆ ವಾರ್ಷಿಕ ಸಭೆಯು ಗುರುವಾರ ಪಾಂಡೇಶ್ವರ ಪೊಲೀಸ್‌ಲೈನಿನ ಶ್ರೀ ಮುನೀಶ್ವರ ಮಹಾಗಣಪತಿ ದೇವಸ್ಥಾನ ಸಭಾಂಗಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷ, ನಿವೃತ್ತ ಎಸ್ಪಿ ಪಿ.ಹರೀಶ್ಚಂದ್ರ ಮಾತನಾಡಿ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸರಕಾರದ ವತಿಯಿಂದ ಮಾನ್ಯತಾ ಪತ್ರ ಒದಗಿಸಿಕೊಡುವ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸರಕಾರ ವಿಶೇಷ ಸವಲತ್ತುಗಳನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಕ್ಷೇಮಾಭಿವೃದ್ಧಿ ಸಂಘದ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗಿದೆ. ಮುಂದೆಯೂ ಈ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆ ಕೈಗೆತ್ತಿಕೊಳ್ಳಲಾಗುವುದು. ಜತೆಗೆ ಎಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸಮಾನ ಯೂನಿಫಾರ್ಮ್ ನೀತಿ ರಾಜ್ಯವ್ಯಾಪಿ ಜಾರಿಗೊಳಿಸಬೇಕು ಎಂದು ಹರಿಶ್ಚಂದ್ರ ಆಗ್ರಹಿಸಿದರು.
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 75 ವರ್ಷ ಮೇಲ್ಪಟ್ಟ ವಯಸ್ಸಿನ ಸಂಘದ ನಿವೃತ್ತ ಸದಸ್ಯರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ, ನಿವೃತ್ತ ಎಸ್ಪಿ ಎಂ.ಎ.ಅಪ್ಪಯ್ಯ, ಅಧ್ಯಕ್ಷ-ನಿವೃತ್ತ ಎಸ್ಪಿ ಪಿ.ಎಂ.ಪೆಮ್ಮಯ್ಯ, ಕಾರ್ಯಾಧ್ಯಕ್ಷ-ನಿವೃತ್ತ ಎಸ್ಪಿ ಕುಮಾರ್ ಎಸ್.ಕರ್ನಿಂಗ್, ಪ್ರಧಾನ ಕಾರ್ಯದರ್ಶಿ-ನಿವೃತ್ತ ಡಿವೈಎಸ್ಪಿ ಮಾಲೂರಪ್ಪ ಉಪಸ್ಥಿತರಿದ್ದರು.
ನಿವೃತ್ತ ಎಸ್ಪಿ -ಸಂಘದ ಉಪಾಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು.ನಿವೃತ್ತ ಎಸ್ಸೈ-ಪ್ರಧಾನ ಕಾರ್ಯದರ್ಶಿ ನಾರಾಯಣ ಬೈಂದೂರು ವರದಿ ವಾಚಿಸಿದರು. ನಿವೃತ್ತ ಎಸ್ಸೈ-ಕೋಶಾಧಿಕಾರಿ ವಿ.ಮಹಮ್ಮದ್ ಲೆಕ್ಕಪತ್ರ ಮಂಡಿಸಿದರು. ನಿವೃತ್ತ ಡಿವೈಎಸ್ಪಿ ಟಿ.ಸಿ.ಎಂ.ಶರೀಫ್ ಸದಸ್ಯರ ಅನಿಸಿಕೆಗಳ ಬಗ್ಗೆ ಸಮಜಾಯಿಸಿ ನೀಡಿದರು. ನಿವೃತ್ತ ಇನ್‌ಸ್ಪೆಕ್ಟರ್ ಅನಸೂಯ ವಂದಿಸಿದರು. ಸಂಚಾರ ಪೂರ್ವ ಠಾಣೆಯ ಎಎಸ್ಸೈ ಹರೀಶ್ಚಂದ್ರ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.