ಉಡುಪಿ: ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ವಿತರಣೆ

Update: 2019-05-09 14:17 GMT

ಉಡುಪಿ, ಮೇ 9: ಜಿಲ್ಲೆಯಲ್ಲಿ ಅಸಾಧಾರಣ ಸಾಧನೆ ತೋರಿದ ಮಕ್ಕಳಿಗೆ 2018-19ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗಳನ್ನು ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಬಾಲಭವನದಲ್ಲಿ, ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲ ಭವನ ಸಮಿತಿ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್ ಗುರುವಾರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ನಡೆಯುವ ಬೇಸಿಗೆ ಶಿಬಿರದಲ್ಲಿ ಪ್ರತಿ ವರ್ಷ ವಿನೂತನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಮಕ್ಕಳಿಗೆ ಓದಿನ ಜೊತೆ ಇತರೆ ಹವ್ಯಾಸಗಳು ಮುಖ್ಯ. ಇದರಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಸಾಧ್ಯವಾಗಲಿದೆ. ಮಕ್ಕಳಲ್ಲಿರುವ ಪ್ರತಿಭೆ ಇಂತಹ ಶಿಬಿರಗಳ ಮೂಲಕ ಹೊರ ಹೊಮ್ಮಲಿದೆ ಎಂದು ಹೇಳಿದರು.

ಈ ಬಾರಿಯ ಬೇಸಿಗೆ ಶಿಬಿರಕ್ಕೆ 75 ಮಕ್ಕಳು ದಾಖಲಾಗಿದ್ದು, ಮಕ್ಕಳಿಗೆ ಚಿತ್ರಕಲೆ, ಸಂಗೀತ, ಕ್ರಾಪ್ಟ್, ಯೋಗ, ಕರಾಟೆ, ನೃತ್ಯ ತರಬೇತಿಯನ್ನು ನುರಿ ತರಬೇತುದಾರರಿಂದ ನೀಡಲಾಗಿದೆ.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು, ಕ್ರೀಡಾ ಕ್ಷೇತ್ರದಲ್ಲಿ ತನುಶ್ರೀ ಮತ್ತು ಮನೋಜ್, ಕಲಾ ಕ್ಷೇತ್ರದಲ್ಲಿ ಪಾವನ ಐತಾಳ್ ಮತ್ತು ಆದರ್ಶ ಭಟ್, ಸಂಗೀತ ಕ್ಷೇತ್ರದಲ್ಲಿ ಮಹತಿ ಮತ್ತು ರಕ್ಷಿತ್ ಆರ್ ಭಟ್, ನಾವೀನ್ಯತೆ ಕ್ಷೇತ್ರದಲ್ಲಿ ಸೃಜನ್ ಮತ್ತು ಉದ್ಭವಿ ಯು ಶೆಟ್ಟಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಭಿನವ ಮತ್ತು ವೀಣಾ, ತಾರ್ಕಿಕ ಕ್ಷೇತ್ರದಲ್ಲಿ ದೀಕ್ಷಾ ಹೋಬಳಿದಾರ್ ಮತ್ತು ನಚಿಕೇತ ನಾಯಕ್ ಹಾಗೂ ಸಮಾಜ ಸೇವೆಯಲ್ಲಿ ಸುಖೇಶ್ ಮತ್ತು ರಚಿತ ಇವರಿಗೆ ವಿತರಿಸಲಾಯಿತು.

ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾ ಯಿತು. ನಂತರ ನಡೆದ ಅಭಿರಂಗ ಮಕ್ಕಳ ನಾಟಕೋತ್ಸವದಲ್ಲಿ, ಕಪ್ಪು ಕಾಗೆಯ ಹಾಡುಗಳು ಮತ್ತು ಜೈ ಬೇತಾಳ ಎಂಬ ಸಾಮಾಜಿಕ ನಾಟಕವನ್ನು ಮಕ್ಕಳು ಪ್ರದರ್ಶಿಸಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಶಿಕ್ಷಣಾಧಿಕಾರಿ ಜಾಹ್ನವಿ, ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮ ಉಪಸ್ಥಿತರಿದ್ದರು. ಅಮೃತ್ ಸ್ವಾಗತಿಸಿ, ಅಬ್ದುಲ್ಲಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News