ಸುವರ್ಣ ತ್ರಿಭುಜದ ಅವಶೇಷಗಳೆಂದು ಒಪ್ಪಿಕೊಂಡ ಕುಟುಂಬ: ಮೀನುಗಾರರ ಬಗ್ಗೆ ಮಾಹಿತಿ ನೀಡದ ನೌಕಾದಳ

Update: 2019-05-09 17:39 GMT

ಕಾರವಾರ, ಮೇ 9: ಕಳೆದ ನಾಲ್ಕೂವರೆ ತಿಂಗಳ ಹಿಂದೆ ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳಸಮುದ್ರದ ಮೀನುಗಾರಿಕೆಗೆ ಹೊರಟು ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳ ಚಿತ್ರಗಳನ್ನು ನೌಕಾಸೇನೆ ಅಧಿಕೃತವಾಗಿ ಗುರುವಾರ ಬಿಡುಗಡೆಗೊಳಿಸಿದೆ.

ಮಹಾರಾಷ್ಟ್ರದ ಮಾಲ್ವಾಣ ಸಮುದ್ರ ವ್ಯಾಪ್ತಿಯಲ್ಲಿ ಮುಳುಗಡೆಯಾದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳನ್ನು ಇತ್ತೀಚೆಗೆ ಐಎನ್‌ಎಸ್ ನಿರೀಕ್ಷಕ ನೌಕೆ ಪತ್ತೆ ಹಚ್ಚಿತ್ತು. ಈ ಬಗ್ಗೆ ನೌಕಾದಳದ ವಕ್ತಾರರು ಟ್ವೀಟ್ ಮಾಡಿದ್ದರು. ಆದರೆ, ಈ ಬಗ್ಗೆ ಯಾವುದೇ ದಾಖಲೆಗಳನ್ನು ಬಿಡುಗಡೆಗೊಳಿಸಿರಲಿಲ್ಲ.

ತಮ್ಮವರನ್ನು ಪತ್ತೆ ಹಚ್ಚುವಂತೆ ಕುಟುಂಬದವರು ಹಲವಾರು ಬಾರಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ, ಸರಕಾರಗಳ ಹಲವು ಪ್ರಯತ್ನಗಳು ನಡೆಸಿದರೂ ಎಪ್ರಿಲ್ ವರೆಗೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಬಳಿಕ ಮೇ 1 ರಂದು ನೌಕಾಪಡೆಯ ಹಡಗು ಐಎನ್‌ಎಸ್ ನಿರೀಕ್ಷಕದಲ್ಲಿ ಮೀನುಗಾರ ಮುಖಂಡರ ತಂಡದೊಂದಿಗೆ ಶೋಧ ಕಾರ್ಯಕ್ಕೆ ಇಳಿದಿತ್ತು. ಬೋಟ್ ಸಂಪರ್ಕ ಕಳೆದುಕೊಂಡಿದ್ದ ಮಹರಾಷ್ಟ್ರದ ಸಿಂಧುದುರ್ಗದ ಆಳಸಮುದ್ರದ ಸುತ್ತಮುತ್ತ ಎರಡು ದಿನಗಳ ಕಾಲ ಸೋನಾರ್ ತಂತ್ರಜ್ಞಾನ ಬಳಸಿ ನಿರಂತರವಾಗಿ ಹುಡುಕಾಟ ನಡೆಸದ ಪರಿಣಾಮ ಮೂರನೇ ದಿನ ಮಾಲ್ವನ್ ಎಂಬಲ್ಲಿ 60 ಮೀಟರ್ ಆಳದಲ್ಲಿ ಬೋಟ್‌ನ ಅವಶೇಷವೊಂದು ಪತ್ತೆಯಾಗಿತ್ತು.

ಬಳಿಕ ಸುವರ್ಣ ತ್ರಿಭುಜದ ಬೋಟ್‌ನ ಅವಶೇಷಗಳೇ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸುವ ನಿಟ್ಟಿನಲ್ಲಿ ಆಳ ಸಮುದ್ರದಲ್ಲಿ ಕ್ಯಾಮರಾ ಬಿಡಲಾಗಿತ್ತು. ಅಲ್ಲದೆ, ನೌಕಾಪಡೆಯ ಪರಿಣಿತ ಮುಳುಗು ತಜ್ಞರ ತಂಡವೂ ನೀರಿನಾಳದಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ನೀರಿನ ಆಳದಲ್ಲಿ ಗೋಚರಿಸಿದ್ದ ಅವಶೇಷಗಳು ಸುವರ್ಣ ತ್ರಿಭುಜದ ಬೋಟ್‌ಗೆ ಸೇರಿದ್ದು ಎಂದು ಮೀನುಗಾರ ಮುಖಂಡರು ತಿಳಿಸಿದ್ದರು. ಅಲ್ಲದೆ, ಪರಿಶೀಲನೆಯ ವೇಳೆ ತೆಗೆಯಲಾಗಿದ್ದ ಫೋಟೊ, ವೀಡಿಯೊಗಳನ್ನು ನಾಪತ್ತೆಯಾಗಿದ್ದ ಮೀನುಗಾರರ ಕುಟುಂಬಗಳಿಗೆ ರವಾನಿಸಿ ಖಚಿತ ಪಡಿಸಿತ್ತು. ಇದೀಗ ಸುವರ್ಣ ತ್ರಿಭುಜ ಬೋಟ್‌ನ ಹೆಸರು ಇರುವ ಚಿತ್ರಗಳನ್ನು ನೌಕಾಪಡೆಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ಈ ಬೋಟ್ ಪತ್ತೆಗೆ ಉತ್ತರ ಕನ್ನಡ ದಕ್ಷಿಣ ಜಿಲ್ಲೆಯ ಪೊಲೀಸ್, ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್ ಸಾಕಷ್ಟು ಶ್ರಮಿಸಿದ್ದವು. ಆದರೆ, ಬೋಟ್ ಪತ್ತೆಯಾಗಿರಲಿಲ್ಲ. ನೌಕಾಸೇನೆಯು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಮುದ್ರದ ಆಳದಲ್ಲಿ ಬೋಟ್‌ಯ ಅವಶೇಷಗಳನ್ನು ಪತ್ತೆ ಮಾಡಿದ್ದು, ಚಿತ್ರಗಳನ್ನು ನೇವಿ ಪಿಆರ್‌ಒ ಬಿಡುಗಡೆ ಮಾಡಿದ್ದಾರೆ. ಆದರೆ, ಬೋಟ್‌ನಲ್ಲಿದ್ದ ಏಳು ಜನ ಮೀನುಗಾರರ ಬಗ್ಗೆ ಅದು ಯಾವುದೇ ಮಾಹಿತಿ ನೀಡಿಲ್ಲ.

ಕಳೆದ 2018ರ ಡಿ.13 ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಡಿ.15 ರಂದು ಮಹಾರಾಷ್ಟ್ರದ ಬಳಿಯ ಸಮುದ್ರದಲ್ಲಿ ಬಂದರ್‌ನ ಸಂಪರ್ಕ ಕಳೆದುಕೊಂಡಿತ್ತು. ಬೋಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ 5 ಹಾಗೂ ಉಡುಪಿ ಜಿಲ್ಲೆಯ ಇಬ್ಬರು ಸೇರಿ ಒಟ್ಟು 7 ಮೀನುಗಾರರಿದ್ದು ನಾಪತ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News