‘ಡಿಜಿಟಲ್ ಇನ್ ಫಾರ್ಮೆಟಿಕ್ಸ್’ ಕಾರ್ಯಾಗಾರ ಉದ್ಘಾಟನೆ
ಮಂಗಳೂರು, ಮೇ 10: ಮಾಹಿತಿ ಪ್ರಸರಣದ ಡಿಜಿಟಲೀಕರಣವು ಯುವ ಸಮುದಾಯಕ್ಕೆ ತುಂಬಾ ಸಹಕಾರಿಯಾಗಿದೆ. ದಿನದಿಂದ ದಿನಕ್ಕೆ ಹೊಸ ಮಾಹಿತಿಗಳನ್ನು ಪಡೆಯುವುದರೊಂದಿಗೆ ದೈನಂದಿನ ಆಗುಹೋಗುಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿಶ್ರಾಂತ ಪ್ರೊ. ಕೈಝರ್ ಎಂ. ಖಾನ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ದ.ಕ. ಹಾಗೂ ಕೊಡಗು ಗ್ರಂಥಾಲಯ ಸಂಘದ ವತಿಯಿಂದ ನಗರದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಡಿಜಿಟಲ್ ಇನ್ ಫಾರ್ಮೆಟಿಕ್ಸ್’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲೀಕರಣಗೊಂಡ ಮಾಹಿತಿ ತಂತ್ರಜ್ಞಾನವು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ದಿನದ ಆಗುಹೋಗುಗಳನ್ನು ತಿಳಿದುಕೊಂಡು ಸ್ಪರ್ಧಾತ್ಮಕ ಯುಗಕ್ಕೆ ತೆರೆದುಕೊಳ್ಳುವುದು ಮತ್ತು ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸಲು ಜ್ಞಾನದ ಪ್ರಸರಣಕ್ಕೆ ಇದು ನೆರವಾಗುತ್ತದೆ ಎಂದು ಪ್ರೊ. ಕೈಝರ್ ಎಂ. ಖಾನ್ ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ್‌ಕುಮಾರ್ ಎಂ.ಎ. ಮಾತನಾಡಿ ಮಾಹಿತಿ ಪ್ರವಹಿಸುವಿಕೆಯ ಯುಗದಲ್ಲಿ ಜ್ಞಾನದ ಪ್ರವಹಿಸುವಿಕೆಯೂ ಅತ್ಯಗತ್ಯವಾಗಿದೆ. ಜ್ಞಾನ ಗಳಿಸುವಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸಂಘದ ಕಾರ್ಯದರ್ಶಿ ಡಾ.ರಾಜಶೇಖರ್ ಕುಂಬಾ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಡಾ. ವಾಸಪ್ಪ ಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿವಿ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕಿ ವನಜಾ ಸ್ವಾಗತಿಸಿದರು.